ಮಡಿಕೇರಿ ಅ.13 : ಕೊಡಗು ಕಸದ ಕೊಂಪೆಯಾಗಿ ಮಾರ್ಪಡುತ್ತಿದ್ದು, ಶಾಸಕದ್ವಯರು ಜಿಲ್ಲೆಯ ವಿವಿಧೆಡೆ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಮುಂದಾಳತ್ವ ವಹಿಸಬೇಕೆಂದು ಅಲ್ಲರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲರಂಡ ವಿಠಲ್ ನಂಜಪ್ಪ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತವು ಭಾರತೀಯ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟದ ಒಂದು ಭಾಗ. ಗಾಂಧಿಜಿಯವರು ಸ್ವಾತಂತ್ರ್ಯ ಹೋರಾಟದಷ್ಟೆ ಮಹತ್ವವನ್ನು ಶುಚಿತ್ವದೆಡೆಗೆ ನೀಡಿದ್ದರು. ಅಲ್ಲದೇ ಇಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಪರಿಕಲ್ಪನೆಯೊಂದಿಗೆ ಸ್ವತಃ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಆದರೆ ಸ್ವಚ್ಛತೆಯ ವಿಚಾರದಲ್ಲಿ ಹಿಂದುಳಿದಿದ್ದು, ವಿಶ್ವ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಎಲ್ಲಾ ನಗರಗಳು ಕಸದ ಕೊಂಪೆಗಳಾಗಿ ಮಾರ್ಪಡುತ್ತಿದ್ದು, ಸಾಂಕ್ರಾಮಿಕ ರೋಗ ಹರುಡುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಬೇಕು. ಮಡಿಕೇರಿಯಲ್ಲಿ ಬೃಹತ್ ಘಟಕ ಸ್ಥಾಪಿಸಿದರೆ ಅಕ್ಕಪಕ್ಕದ ಗ್ರಾಮಗಳಿಗೂ ಅನುಕೂಲವಾಗುತ್ತದೆ. ಜಿಲ್ಲೆಯ ಶಾಸಕದ್ವಯರು ಖುದ್ದು ಮುತುವರ್ಜಿ ವಹಿಸಿ ಘಟಕ ಸ್ಥಾಪನೆಗೆ ಮುಂದಾಗಬೇಕು. ಕಾವೇರಿ ಸಂಕ್ರಮಣ, ದಸರಾ ಸಮೀಪಿಸ್ತಿದ್ದು, ಎಲ್ಲೆಂದರಲ್ಲಿ ಕಸ ಹಾಕದಂತೆ ಪ್ರವಾಸಿಗರು, ಬೀದಿ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಸ್ವಚ್ಛತೆ ಕಾಪಾಡಲು ಎಲ್ಲರೂ ಕೈಜೋಡಿಸಬೇಕೆಂದು ವಿಠಲ ನಂಜಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗೌಡಂಡ ವಿನಯ್ ತಿಮ್ಮಯ್ಯ, ಸಾಮಾಜಿಕ ಕಾರ್ಯಕರ್ತ ಗೌಡಂಡ ಬೋಪಯ್ಯ ಹಾಜರಿದ್ದರು.







