ಮಡಿಕೇರಿ ನ.27 : ವಿಶಿಷ್ಟ ಸಂಸ್ಕೃತಿಯ ಕೊಡವ ಜನಾಂಗದ ಪ್ರಧಾನ ಹಬ್ಬಗಳಲ್ಲಿ ಒಂದಾದ ಪುತ್ತರಿಯನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದಕ್ಷಿಣ ಕೊಡಗಿನ ಬಾಳೆಲೆ ಬಳಿಯ ಆರ್ಕೇರಿನಾಡಿನ ಬಿಳೂರು ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಿತು.
ಹುಣ್ಣಿಮೆಯ ದಿನವಾದ ಇಂದು ಬೆಳಗ್ಗೆ ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಾಂಪ್ರದಾಯಿಕವಾಗಿ ನವ ಧಾನ್ಯ ಭತ್ತದ ಕದಿರು ಕೊಯ್ಯುವ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.
ತೆನೆ ತುಂಬಿದ ಕದಿರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಪ್ರಕೃತಿ ದೇವಿಗೆ ನಮಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ಪುತ್ತರಿಯ ಆಚಾರ, ವಿಚಾರಗಳನ್ನು ಆರಂಭಿಸಿದರು. ಕೊಯ್ದ ಕದಿರನ್ನು “ಪೊಲಿಯೇ ಬಾ, ಪೊಲಿ ಪೊಲಿಯೇ ಬಾ” ಎಂದು ಧಾನ್ಯಲಕ್ಷ್ಮಿಯನ್ನು ಘೋಷವಾಕ್ಯದ ಮೂಲಕ ಆಹ್ವಾನಿಸುತ್ತಾ ಮನೆ ತುಂಬಿಕೊಂಡರು. ನಂತರ ನವ ಧಾನ್ಯವನ್ನು ಪೂಜ್ಯಸ್ಥಾನದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಕೊಡವ ಜನಾಂಗ ಹಾಗೂ ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಸಿಎನ್‍ಸಿ ಸಂಘಟನೆ ಆಚರಿಸಿದ 30ನೇ ವರ್ಷದ ಸಾರ್ವತ್ರಿಕ ಪುತ್ತರಿ ಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾಕ್ಷಿಯಾದ ವಿರಾಟ್ ಹಿಂದೂಸ್ಥಾನ್ ಸಂಘಂನ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಕೊಡವ ಸಂಪ್ರದಾಯವನ್ನು ಕೊಂಡಾಡಿದರು.
ಅತ್ಯಂತ ಸೂಕ್ಷ್ಮ ಕೊಡವ ಜನಾಂಗದ ವಿಶಿಷ್ಟವಾದ ಸಂಸ್ಕೃತಿಯಯನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಾತನಾಡಿ ಕೊಡವ ಜನಾಂಗದ ಎಲ್ಲಾ ಹಬ್ಬಗಳು ಮಾತೃ ಭೂಮಿ, ಪ್ರಕೃತಿ, ದೈವಿಕ ವಸಂತ ಕಾವೇರಿ, ವೀರತನ, ಬೇಟೆಯ ಕೌಶಲ್ಯ, ಜನಾಂಗೀಯ “ಸಂಸ್ಕಾರ ಗನ್ / ಆಯುಧ” ಮತ್ತು ಕೃಷಿ ಪ್ರವೃತ್ತಿಯ ಬದ್ಧತೆಗಳ ಸುತ್ತ ಸುತ್ತುತ್ತವೆ. ಕೊಡವರ ಹಬ್ಬಗಳು ಸೂರ್ಯ- ಚಂದ್ರರ ಮೂಲಕ ವಿಕಸನಗೊಂಡಿವೆ. ಕೊಡವ ಸಂಸ್ಕೃತಿಯಯಲ್ಲಿ ಅಥವಾ ಕೊಡವ ಹಬ್ಬಗಳನ್ನು ನಿರ್ಧರಿಸುವ ಸಂದರ್ಭ ಮೂಢನಂಬಿಕೆಗೆ ಅವಕಾಶವಿಲ್ಲ. ನಮ್ಮ ಗುರು, ಹಿರಿಯರು ಕೊಡವ ಜಾನಪದ ಪರಂಪರೆ, ಕಾನೂನು ವ್ಯವಸ್ಥೆಗಳು ಮತ್ತು ನಮ್ಮ ಆಚರಣೆಗಳನ್ನು ಬಹಳ ಹಿಂದೆಯೇ ರೂಪಿಸಿದ್ದಾರೆ. ಇದು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲ್ಪಟ್ಟಿದೆ ಎಂದರು.
ಕೊಡವರಿಗೆ ಯಾವುದೇ ಧಾರ್ಮಿಕ ಕ್ರಿಯೆಯ ಏಜೆಂಟ್‍ಗಳ ಅಗತ್ಯವಿಲ್ಲ. ಕೊಡವರು ನೇರವಾಗಿ ಪ್ರಕೃತಿಯ ಚಕ್ರದ ಮೂಲಕ ಸರ್ವಶಕ್ತ ಮತ್ತು ದೈವಿಕತೆಯೊಂದಿಗೆ ಧಾರ್ಮಿಕ ಹಾಗೂ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾರೆ. ನಮ್ಮ ಜನಪದ ಆಚರಣೆಗಳನ್ನು ನಾವೇ ನಿರ್ಧರಿಸುತ್ತೇವೆ. ಕೊಡವ ಜನಾಂಗೀಯ ಹಬ್ಬಗಳ ಕ್ಯಾಲೆಂಡರ್‍ನಲ್ಲಿ ಪುತ್ತರಿ ಹಬ್ಬವು ಪ್ರಧಾನ ಹಬ್ಬವಾಗಿದೆ. ಪುತ್ತರಿ ಎಂಬುವುದು ತಮಿಳು ಕ್ಯಾಲೆಂಡರ್‍ನ ಪೊ0ಗಲ್ ಮತ್ತು ಸಿಖ್ಖರ ಬೈಸಾಕಿ ಇದ್ದಂತೆ.
ನವಧಾನ್ಯವನ್ನು ಶ್ರದ್ಧಾಭಕ್ತಿಯಿಂದ ಗದ್ದೆಯಿಂದ ತಂದು ಮನೆ ತುಂಬಿಸಿಕೊಳ್ಳುವ ಕೊಡವರ ಸಂಪ್ರದಾಯವೇ ಪುತ್ತರಿಯಾಗಿದ್ದು, ಇದು ಸಮೃದ್ಧಿಯ ಸಂಕೇತವಾಗಿದೆ. ನಮ್ಮ ವಿಶಿಷ್ಟ ಹಬ್ಬಗಳನ್ನು ಇಡೀ ವಿಶ್ವಕ್ಕೆ ತಿಳಿಸುವುದು ಮತ್ತು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಳೆದ 3 ದಶಕಗಳಿಂದ ಸಿಎನ್‍ಸಿ ಸಂಘಟನೆ ಸಾರ್ವತ್ರಿಕವಾಗಿ ಪುತ್ತರಿಯನ್ನು ಆಚರಿಸಿಕೊಂಡು ಬರುತ್ತಿದೆ. ಕೊಡವ ಬುಡಕಟ್ಟು ಜನಾಂಗದ ಈ ವಿಶಿಷ್ಟ ಸಂಸ್ಕೃತಿ ಸೂರ್ಯ, ಚಂದ್ರರಷ್ಟೇ ಶಾಶ್ವತವಾಗಿದೆ. ಆದರೆ ಇದನ್ನು ಉಳಿಸಿ ಬೆಳೆಸಬೇಕಾದರೆ ಕೊಡವರಿಗೆ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತತ್ತೆಯ ಹಕ್ಕನ್ನು ನೀಡಲೇಬೇಕಾದ ಅನಿವಾರ್ಯತೆ ಇದೆ ಎಂದು ನಾಚಪ್ಪ ಹೇಳಿದರು.
ಕಾಂಡೇರ ಸುರೇಶ್, ಕಾಂಡೇರ ಲೇಖ ಸುರೇಶ್, ಕಾಂಡೇರ ಲವಿನ್ ಪೂಣಚ್ಚ, ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅಲ್ಮಂಡ ನೆಹರು, ಅರೆಯಡ ಗಿರೀಶ್, ಚಂಬಂಡ ಜನತ್, ಅಪ್ಪೆಂಗಡ ಮಲೆ, ಕಿರಿಯಮಾಡ ಶೆರಿನ್, ಕಿರಿಯಮಾಡ ಶವಾನ್, ಅಜ್ಜಮಾಡ ಚಿಮ್ಮ, ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ, ಪುಲ್ಲಂಗಡ ದೇವಯ್ಯ, ಅದೇಂಗಡ ರಾಣಾ ಬೋಪಣ್ಣ, ಅದೇಂಗಡ ದಿನು ಮೇದಪ್ಪ, ಮಾಳೇಟಿರ ಪೊನ್ನಪ್ಪ, ಪುಟ್ಟಿಚಂಡ ಶಂಕರ್ ಮತ್ತಿತರರು ಪಾಲ್ಗೊಂಡು ಕೊಡಗಿನ ಸಮೃದ್ಧಿ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥಿಸಿದರು.
ನೆರೆದಿದ್ದವರು ಪುತ್ತರಿ ಹಬ್ಬದ ಕೊಡವ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದು ಸಂಭ್ರಮಸಿದರು.







