ವಿರಾಜಪೇಟೆ ನ.30 : ಸಮೀಪದ ಆರ್ಜಿ ಗ್ರಾಮದ ಕಲ್ಲುಬಾಣೆ ಬದ್ರಿಯಾ ಶಾಲೆಯಲ್ಲಿ, ಮಕ್ಕಳ ಸಂತೆ ನಡೆಯಿತು.
ತಾಜಾ ಸೊಪ್ಪು, ಮನೆಯಲ್ಲಿ ಬೆಳಸಿದ ತರಕಾರಿ, ಹಣ್ಣುಗಳು, ಮಕ್ಕಳಿಂದಲೇ ತಯಾರಿಸಲ್ಪಟ್ಟ ಐಸ್‍ಕ್ರೀಂ, ಬೋಂಡ, ಬಜ್ಜಿ, ಫ್ರೂಟ್ ಸಲಾಡ್ ಆಕರ್ಷಣೀಯವಾಗಿತ್ತು. ಮಕ್ಕಳಲ್ಲಿ ಕಂಡು ಬಂದ ಸ್ಪರ್ಧಾತ್ಮಕ ಮನೋಭಾವ ಗ್ರಾಹಕರ ಗಮನ ಸೆಳೆಯಿತು.
ಮಕ್ಕಳಲ್ಲಿ ಕುಶಲತೆ, ಸಂವಹನ ಕಲೆ, ಸಾಮಾಜಿಕ ಬದುಕಿನೊಂದಿಗೆ ಒಡನಾಟದ ಕೌಶಲ್ಯವನ್ನು ಕಲಿಸುವುದರೊಂದಿಗೆ, ಅವರಲ್ಲಿ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ, ಈ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಚಿಣ್ಣರು, ಗ್ರಾಹಕರ ಬಳಿ ಹಣ ಪಡೆದು ವ್ಯಾಪಾರ-ವಹಿವಾಟು ನಡೆಸಿದ್ದು, ಮಕ್ಕಳು ವ್ಯಾಪಾರ ಮಾಡಿ ಖುಷಿಪಟ್ಟರು.
ಈ ಸಂದರ್ಭ ಮಾತನಾಡಿದ ಮುಖ್ಯೋಪದ್ಯಾಯರಾದ ಮಹದೇವ್, ವಿದ್ಯಾರ್ಥಿಗಳಿಗೆ ಲಾಭ ನಷ್ಟದ ಪರಿಚಯ, ವ್ಯವಹಾರ ಜ್ಞಾನ, ಸ್ವಚ್ಛತೆಯ ಪರಿಕಲ್ಪನೆ ಮೂಡಿಸಲು ಮಕ್ಕಳ ಸಂತೆ ಉಪಯುಕ್ತವಾಗುತ್ತದೆ. ಶಾಲೆಗಳಲ್ಲಿ ಆಟ-ಪಾಠದ ಜೊತೆಗೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಮುಂಬರುವ ದಿನಗಳಲ್ಲಿ ತಮ್ಮ ಬದುಕು ಹೇಗೆ ಕಟ್ಟಿಕೊಳ್ಳಬೇಕೆಂಬುವುದು ಅನುಭವ ದೊರೆತಂತಾಗುತ್ತದೆ ಎಂದು ಹೇಳಿದರು.
ಗ್ರಾ.ಪಂ ಸದಸ್ಯ ಶಹಧೀರ್ ಅಲಿ ಮಾತನಾಡಿ, ಇಂತಹ ಕಾರ್ಯಕ್ರಮದ ಬಗ್ಗೆ ಮಕ್ಕಳಿಗೆ ಕಲಿಸಿದರೆ ಅವರ ಜೀವನ ಕಟ್ಟಿಕೊಳ್ಳಲು ಅನುಭವ ದೊರೆತಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳು, ಪೋಷಕರುಗಳು, ಶಿಕ್ಷಕರು ಸಿಬ್ಬಂಧಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಈಶಾನ್ವಿ







