ವಿರಾಜಪೇಟೆ ಡಿ.4 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕಾನೂರು ವಲಯದ ಕುಟ್ಟ ಗ್ರಾ.ಪಂ ಸಭಾಂಗಣದಲ್ಲಿ ಭದ್ರ ಮತ್ತು ಜ್ಞಾನಜ್ಯೋತಿ ಕೇಂದ್ರಗಳ ಸದಸ್ಯರುಗಳಿಗೆ “ಸ್ವ ಉದ್ಯೋಗದೊಂದಿಗೆ ಸ್ವಾವಲಂಬನೆಯ ಮೂಲಕ ಮಹಿಳೆಯರ ಬದುಕು ಹಸನಾಗಿಸಲು” ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಆತ್ಮಯೋಜನೆ ರಾಜ್ಯಮಟ್ಟದ ಸದಸ್ಯೆ ರೋಹಿಣಿ ಸುಬ್ಬಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸ್ವ ಉದ್ಯೋಗ ತರಬೇತಿಗಳನ್ನು ನಿರಂತರವಾಗಿ ಹಮ್ಮಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಗ್ರಾಮೀಣ ಮಹಿಳೆಯರ ಪಾಲಿನ ಆಶಾಕಿರಣವಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಇಂದು ಸ್ವ ಉದ್ಯೋಗ ಅನ್ನುವುದು ಅತ್ಯಂತ ಪ್ರಚಲಿತ ಹಾಗೂ ಸರ್ವರಿಗೂ ಸಲ್ಲುವ ಉದ್ಯೋಗವಾಗಿದೆ. ಇಂದಿನ ದಿನಗಳಲ್ಲಿ ವಿಶೇಷವಾಗಿ ಮಹಿಳೆಯರು ಹಲವಾರು ವಿಧದ ಸ್ವ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಸ್ವಾವಲಂಬನೆಯ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೂಡಾ ಈ ಹಾದಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ರುಡ್ ಸೆಟ್ ಸಂಸ್ಥೆಯ ಮೂಲಕ ಸ್ವ ಉದ್ಯೋಗ ಕ್ರಾಂತಿಯನ್ನೇ ಮಾಡಿರುತ್ತಾರೆ. ತಾವುಗಳು ಕೂಡಾ ಇತರರ ಲೆಕ್ಕ ಬರೆಯುವುದಕ್ಕಿಂತ ನಮ್ಮ ಲೆಕ್ಕಗಳನ್ನು ನಾವುಗಳೇ ಬರೆಯುವಂತೆ ಆಗಲಿ ಅನ್ನುವುದೇ ನಮ್ಮ ಆಶಯವಾಗಿದೆ. ಅಣಬೆ ಬೇಸಾಯ ಕ್ರಮಗಳು, ಜೇನು ಸಾಕಾಣಿಕೆ, ಹೈನುಗಾರಿಕೆ, ಅಲಂಕಾರಿಕ ವಸ್ತುಗಳ ತಯಾರಿ ವಿಧಾನಗಳು, ಆಹಾರ ಪದ್ಧತಿಗೆ ಸಹಕಾರಿ, ಮಾರುಕಟ್ಟೆ ವ್ಯವಸ್ಥೆ ಎಂಬೆಲ್ಲ ವಿಚಾರ ಬಗ್ಗೆ ಸವಿಸ್ತಾರವಾದ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮುಖೇನವಾಗಿ ನೀಡಿದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾನೂರು ವಲಯದ ಮೇಲ್ವಿಚಾರಕ ನಿತಿನ್ ಇದ್ದರು.
ಪೂಜೆಕಲ್ಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹೇಮಾವತಿ ಸ್ವಾಗತಿಸಿ, ಕುಟ್ಟ ಕಾರ್ಯಕ್ಷೇತ್ರದ ಸ್ವಪ್ನ ನಿರೂಪಿಸಿದರು.







