ಮಡಿಕೇರಿ ಫೆ.21 NEWS DESK : ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ನೀಡುವ “ಗೃಹಲಕ್ಷ್ಮಿ”ಯ ಮಾಸಿಕ ರೂ.2 ಸಾವಿರ ಅನೇಕರಿಗೆ ಇಲ್ಲಿಯವರೆಗೆ ತಲುಪಿಲ್ಲ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಜಿಲ್ಲಾ ಕೋಶಾಧಿಕಾರಿ ಕೆ.ಎಂ.ಯೂಸುಫ್, ಸೌಲಭ್ಯಗಳನ್ನು ತ್ವರಿತವಾಗಿ ಫಲಾನುಭವಿಗಳಿಗೆ ತಲುಪಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಅಂಚೆ ಮೂಲಕ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಅವರು, ಯೋಜನೆಗಳು ಜಾರಿಯಾಗಿ 6 ತಿಂಗಳು ಕಳೆದಿದ್ದರೂ ಸರಕಾರದ ಸೌಲಭ್ಯಕ್ಕಾಗಿ ಜನರು ಪರದಾಡುವುದು ತಪ್ಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನೇಕ ಮಹಿಳೆಯರು ದಾಖಲೆಗಳಿಗಾಗಿ ಬ್ಯಾಂಕ್, ತಾಲ್ಲೂಕು ಕಚೇರಿ, ಆಧಾರ್ ಸೆಂಟರ್, ಸೈಬರ್ ಸೆಂಟರ್‍ಗಳಿಗೆ ಅಲೆದಾಡುತ್ತಿದ್ದಾರೆ. ಇದರಿಂದ ಕೆಲವೊಂದು ಮನೆಗಳಲ್ಲಿ ಕಲಹ ಏರ್ಪಡುತ್ತಿದೆ. ಸರಕಾರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುವ ಕ್ರಮ ಕೈಗೊಂಡಿದ್ದರೆ ಅಥವಾ ಎಲ್ಲಾ ದಾಖಲೆಗಳನ್ನು ಪರಿಪೂರ್ಣಗೊಳಿಸುವಂತೆ ಆದೇಶಿಸಿ, ಆ ನಂತರ ಯೋಜನೆಯನ್ನು ನೀಡಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೃಹಲಕ್ಷ್ಮಿ ಬಗ್ಗೆ ನೂರಾರು ಮಹಿಳೆಯರು ಪ್ರತಿದಿನ ಖುದ್ದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕಛೇರಿಯಲ್ಲಿ ವಿಚಾರಿಸುತ್ತಿದ್ದಾರೆ. ಅಧಿಕಾರಿಗಳು ಸಾಕಷ್ಟು ಉತ್ತಮ ರೀತಿಯಲ್ಲಿ ಪ್ರಯತ್ನಪಟ್ಟರೂ ಸಕಾಲದಲ್ಲಿ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ ಮತ್ತು ಅನೇಕರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಸರಕಾರದ ಸೌಲಭ್ಯವನ್ನೇ ನಂಬಿಕೊಂಡಿರುವ ಬಡಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ. ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿ ವ್ಯವಸ್ಥೆ ಸರಿಪಡಿಸಬೇಕು, ಹೊಸ ಪಡಿತರ ಚೀಟಿ, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ತಕ್ಷಣ ಜಿಲ್ಲಾಡಳಿತ ಮತ್ತು ಆಹಾರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಯಾವುದೇ ಅಡಚಣೆ ಇಲ್ಲದೆ ಫಲಾನುಭವಿಗಳಿಗೆ ತ್ವರಿತವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ಯೂಸುಫ್ ಒತ್ತಾಯಿಸಿದ್ದಾರೆ.







