ಮಡಿಕೇರಿ ಫೆ.21 : ಕೃಷಿಗಾಗಿ ಅಳವಡಿಸಿರುವ ರೈತರ 10 ಹೆಚ್.ಪಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಚೆಸ್ಕಾಂ ಕಚೇರಿ ಎದುರು ಜಮಾಯಿಸಿದ ಸಂಘದ ಪ್ರಮುಖರು ಹಾಗೂ ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡ ಹೇರೂರು ಚಂದ್ರಶೇಖರ್ ಮಾತನಾಡಿ ಈ ಹಿಂದೆ ಮೂರು-ನಾಲ್ಕು ಬಾರಿ ಕೊಡಗಿನ ರೈತರು ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ವಿವರವಾದ ಮನವಿಯನ್ನು ಸಲ್ಲಿಸಿದ್ದರು. ಇತರ ಬೆಳೆಗಳಿಗೆ ನೀಡುತ್ತಿರುವಂತೆಯೇ 10 ಹೆಚ್‌ಪಿ ಒಳಗಿನ ವಿದ್ಯುತ್ ಮೋಟಾರುಗಳಿಗೆ ಸಂಬAಧಿಸಿದAತೆ ಕೊಡಗಿನ ರೈತರಿಗೂ ವಿನಾಯಿತಿ ವಿಸ್ತರಿಸಿಕೊಬೇಕೆಂದು ಹಲವು ಬಾರಿ ಕೋರಿಕೊಳ್ಳಲಾಗಿತ್ತು.
ಸರ್ಕಾರಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಕೂಡ ಭರವಸೆ ನೀಡಿದ್ದರು. ಆದರೆ ಕೊಡಗಿನ ರೈತರ ಪರವಾದ ಯಾವುದೇ ಕ್ರಮವಾಗಿಲ್ಲ. ಬಾಕಿ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಆ ಹಣವನ್ನು ಬ್ಯಾಂಕ್ ಖಾತೆ ಮೂಲಕ ಹಿಂತಿರುಗಿಸುವ ಇಲಾಖೆಯ ಪ್ರಸ್ತಾಪ ಖಂಡನೀಯ ಎಂದರು.
ಸರ್ಕಾರಿ ಆದೇಶದ ಪ್ರತಿಗಳನ್ನು ತಾರದೆ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿರುವುದು ಸರಿಯಲ್ಲ, ರೈತರ ಪಂಪ್ ಸೆಟ್‌ಗಳಿಗೆ ಮತ್ತೆ ಸಂಪರ್ಕ ಕಲ್ಪಿಸಬೇಕು. ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.









