ಮಡಿಕೇರಿ ಮಾ.9 NEWS DESK : ತಾಯಿ ಚಾಮುಂಡಿ ನನ್ನ ಕೈಬಿಡಲ್ಲ, ಕೊಡಗು ಮತ್ತು ಮೈಸೂರು ಜನರ ಆಶೀರ್ವಾದ ನನ್ನ ಮೇಲಿದೆ. ಅಭಿವೃದ್ಧಿ ಕಾರ್ಯದಲ್ಲಿ ನನ್ನ ಮ್ಯಾಚ್ ಮಾಡೋಕೆ ಯಾರಿಗೂ ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಈ ಬಾರಿ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಗಲ್ಲ ಎನ್ನುವ ಊಹಾಪೋಹಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟೀಕರಣ ನೀಡಿದ ಅವರು, ಒಬ್ಬ ಸಂಸದನ ಭವಿಷ್ಯ ನಿರ್ಧಾರ ಮಾಡೋರು ಜನ, ಜನ ಸಂತೋಷವಾಗಿದ್ದಾರೆ, ಆಶೀರ್ವಾದ ಮಾಡ್ತಾರೆ ಅಂದ್ರೆ, ಮೇಲಿನ ನಾಯಕರುಗಳು ಕೂಡ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಬ್ಬ ಸಂಸದನಾಗಿ ನಾನು ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ ಹೇಳಿಬಿಡಿ, ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ನನಗೆ ಮ್ಯಾಚ್ ಮಾಡೋರು ಯಾರಿದ್ದಾರೆ ಎಂದು ಪ್ರಶ್ನಿಸಿದರು.
ನನ್ನ ಕ್ಷೇತ್ರಕ್ಕೆ 11 ರೈಲು ತಂದಿದ್ದೇನೆ, ಸಧ್ಯದಲ್ಲೇ 12 ನೇ ರೈಲು ತರುತ್ತಿದ್ದೇನೆ, ಮೈಸೂರಿಗೆ ರಿಂಗ್ ರೋಡ್ ತರಲಿದ್ದೇನೆ, ಮೆಟ್ರೋ ರೈಲು ನನ್ನ ಮುಂದಿನ ಗುರಿಯಾಗಿದೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ, ಇನ್ನೆರಡು ವರ್ಷದಲ್ಲಿ “ನಲ್ಲಿ” ತಿರುಗಿಸಿದರೆ ಅಡುಗೆ ಅನಿಲ ಬರುವಂತೆ ಮಾಡುತ್ತೇನೆ, ಮೈಸೂರು ಮುಂದೆ ಗ್ರೇಟರ್ ಮೈಸೂರು ಆಗಲಿದೆ. ಯಾರೂ ಏನೇ ಹೇಳಿದರೂ ಅಭಿವೃದ್ಧಿಯೇ ನನ್ನ ಶಕ್ತಿಯಾಗಿದೆ.
ನನ್ನನ್ನು ಕಾಯೋಕೆ ಮೇಲೆ ಚಾಮುಂಡಿ ಇದ್ದಾಳೆ. ಒಂದು ಚುನಾವಣೆಗಿಂತ ಮತ್ತೊಂದು ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ನನ್ನನ್ನು ಜನ ಗೆಲ್ಲಿಸಿದ್ದಾರೆ. ಈ ಬಾರಿ ಕೂಡ 2- 3 ಲಕ್ಷ ಮತಗಳ ಅಂತರದಿAದ ನನಗೆ ಗೆಲುವು ತಂದು ಕೊಡಲಿದ್ದಾರೆ.
ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ, ಕಳೆದ 10 ವರ್ಷ ಸಂಸದನಾಗಿ ನಾನು ನಿಯತ್ತಾಗಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ದ್ವೇಷ ಅಸೂಯೆ ಸಾಮಾನ್ಯ, ತಾಯಿ ಚಾಮುಂಡಿ ಹಾಗೂ ಜನರ ಆಶೀರ್ವಾದ ಇರುವವರೆಗೂ ನನಗೆ ಯಾವುದೇ ಅಸೂಯೆ, ದ್ವೇಷ, ಶಾಪ ತಟ್ಟಲ್ಲ. ಜನಾಭಿಪ್ರಾಯ ನನ್ನ ಕಡೆಗಿದೆ, ಪ್ರತಾಪ್ ಸಿಂಹ ಒಬ್ಬ ಕೆಲಸಗಾರ, ಮೈಸೂರು ಮತ್ತು ಕೊಡಗಿನ ಜನ ಕೆಲಸಗಾರನ ಕೈಹಿಡಿಯಲಿದ್ದಾರೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.








