ಮಡಿಕೇರಿ ಮಾ.11 NEWS DESK : ಕೊಡಗಿನ ಜನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆಯನ್ನು ತಂದಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡ ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಯ ಮಹಾಪೂರವೇ ಆಗುತ್ತಿದೆ ಎಂದು ಕೆಪಿಸಿಸಿ ಸದಸ್ಯ ರಮಾನಾಥ್ ಬೇಕಲ್ ಬಣ್ಣಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ. ಜಿಲ್ಲೆಯ ಸುಮಾರು 1ಲಕ್ಷ ಮಂದಿ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದು, ಪ್ರತಿ ತಿಂಗಳು 20 ಕೋಟಿ ರೂ. ಬರುತ್ತಿದೆ. ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರಿಂದ ಆರ್ಥಿಕ ಚಲಾವಣೆ ಚುರುಕುಗೊಂಡಿದ್ದು, ವ್ಯಾಪಾರ ವಹಿವಾಟು ಚೇತರಿಕೆ ಕಂಡಿದೆ, ಹಳ್ಳಿ ಹಳ್ಳಿಗಳಲ್ಲಿ ಮಂದಹಾಸವಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳೊಂದಿಗೆ ಜನರಿಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ಜಿಲ್ಲೆಯ ಇಬ್ಬರು ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಭಾಗಮಂಡಲ ಕ್ಷೇತ್ರ ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಹೊಂದಿತು. ಕೆ.ಜೆ.ಜಾರ್ಜ್ ಅವರ ಕಾಲದಲ್ಲಿ ಮೇಲು ಸೇತುವೆ ನಿರ್ಮಾಣ ಕಾರ್ಯ ಆರಂಭವಾಯಿತು. ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಭಾಗಂಡಲದ ಅಭಿವೃದ್ಧಿ ಶರವೇಗದಲ್ಲಿ ಸಾಗುತ್ತಿದೆ ಎಂದು ರಮಾನಾಥ್ ಹೇಳಿದರು.
ಡಿಸಿಸಿ ಸದಸ್ಯ ಸುನಿಲ್ ಪತ್ರವೊ ಮಾತನಾಡಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಅಭಿವೃದ್ಧಿಯಾಗುತ್ತಿದ್ದು, ಭಕ್ತರಿಗೆ ಸರ್ವ ಅನುಕೂಲವನ್ನು ಮಾಡಿಕೊಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮದ ಸಹಕಾರದೊಂದಿಗೆ ಕಾಮಗಾರಿ ನಡೆಯುತ್ತಿದ್ದು, ಶಾಸಕರು ಹಾಗೂ ಅಧಿಕಾರಿಗಳು ಅಭಿನಂದನಾರ್ಹರು ಎಂದರು.
ಚಾಲಕರ ಬೇಡಿಕೆಯಂತೆ ಆಟೋರಿಕ್ಷಾ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಪುಣ್ಯಕ್ಷೇತ್ರದಲ್ಲಿ ಜನರ ಭಾವನೆಗಳನ್ನು ಗೌರವಿಸುತ್ತಾ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ವೆಂಕಟೇಶ್ ಮಾತನಾಡಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೂಡ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಭಾಗಮಂಡಲದ ಮೇಲುಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಸಧ್ಯದಲ್ಲಿಯೇ ಉದ್ಘಾಟನೆಗೊಳ್ಳಲಿದೆ. ಕೆಳಭಾಗದ ರಸ್ತೆ 90 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಕೆಆರ್‍ಡಿಸಿಎಲ್ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 35 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. 75 ಲಕ್ಷ ರೂ.ಗಳಲ್ಲಿ ಚೇರಂಗಾಲ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. 10 ಲಕ್ಷ ರೂ.ಗಳಲ್ಲಿ ಭಾಗಮಂಡಲ ಆಸ್ಪತ್ರೆ ದುರಸ್ತಿಯಾಗುತ್ತಿದೆ. ಕೋರಂಗಾಲ ಬಸ್ ತಂಗುದಾಣಕ್ಕಾಗಿ 3 ಲಕ್ಷ ಮತ್ತು ತಲಕಾವೇರಿ ದೇವಾಲಯದ ಅಭಿವೃದ್ಧಿಗಾಗಿ 80 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಭಾಗಮಂಡಲ ಮಾರುಕಟ್ಟೆ ಕೂಡ ಅಭಿವೃದ್ಧಿಯಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಗಮಂಡಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಪ್ರಮುಖರಾದ ದಂಡಿನ ಪೂರ್ಣೇಶ್ ಹಾಗೂ ದೇವಂಗೋಡಿ ತಿಲಕ ಸುಬ್ರಾಯ ಉಪಸ್ಥಿತರಿದ್ದರು.







