ಮಡಿಕೇರಿ ಮಾ.20 NEWS DESK : ನದಿ ಮತ್ತು ನದಿ ಮೂಲದ ನೀರು ಬಳಸದಂತೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಕೊಡಗು ಜಿಲ್ಲಾ ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್, ಕೊಡಗಿನ ಆರ್ಥಿಕತೆಯು ಕಾಫಿ ಕೃಷಿಯನ್ನೇ ಅವಲಂಬಿಸಿದ್ದು, ಕಾಫಿ ಬೆಳೆಗಾರರು ಇಡೀ ವರ್ಷದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಮಾತ್ರ ನೀರನ್ನು ತೋಟಕ್ಕೆ ಬಳಸುತ್ತಾರೆ. ಆದರೆ ಜಿಲ್ಲಾಡಳಿತ ಇದಕ್ಕೆ ವ್ಯತಿರಿಕ್ತವಾಗಿ ಆದೇಶ ನೀಡಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಫಿ ಬೆಳೆಗೆ ಮಾರ್ಚ್ ತಿಂಗಳ ಅವಧಿಯಲ್ಲಿ ನೀರು ಒದಗಿಸದಿದ್ದರೆ ಮುಂದಿನ ವರ್ಷದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಆರ್ಥಿಕತೆಯೇ ಬುಡಮೇಲಾಗಲಿದೆ. ಇದರಿಂದ ಬೆಳೆಗಾರರು ಮಾತ್ರವಲ್ಲ, ಕಾರ್ಮಿಕ ವರ್ಗವೂ ಸಮಸ್ಯೆಗೆ ಸಿಲುಕಲಿದೆ ಎಂದು ತಿಳಿಸಿದರು.
ಮಾರ್ಚ್ ತಿಂಗಳಿನಲ್ಲಿ ಮಳೆಯಾಗದಿದ್ದರೆ ರೈತರು ನೀರಾವರಿ ಮೂಲಕ ಕಾಫಿ ಗಿಡ ಮತ್ತು ಕಾಫಿ ಇಳುವರಿಯನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಬೆಳೆಗಾರರು ಹಾಗೂ ಕೃಷಿ ಕಾರ್ಮಿಕರ ಸಂಕಷ್ಟ ಅರಿತು ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಭತ್ತದ ಗದ್ದೆಗಳು ಲೇಔಟ್‍ಗಳಾಗಿ ಭೂಪರಿವರ್ತನೆಯಾಗುತ್ತಿದ್ದು, ಪರಿಸರ ನಾಶದಿಂದ ನೀರಿನ ಮೂಲಗಳಿಗೆ ದಕ್ಕೆ ಉಂಟಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.90 ರಷ್ಟು ಭತ್ತದ ಗದ್ದೆಗಳು ನಶಿಸಿಹೋಗಿದ್ದು, ಮುಂದೆ ಇದೇ ಪರಿಸ್ಥಿತಿ ಕಾಫಿಗೂ ಬರಲಿದೆ ಎಂದು ದಿವಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ನದಿ, ತೋಡುಗಳಿಗೆ 2-3 ಕಿ.ಮೀ ಅಂತರದಲ್ಲಿ ಚೆಕ್ ಡ್ಯಾಂನ್ನು ನಿರ್ಮಿಸಬೇಕು. ಇದರಿಂದ ಜನ-ಜನವಾರುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಉಸ್ತುವಾರಿ ಕಳ್ಳೀರ ಹರೀಶ್ ಮಾತನಾಡಿ, ಜಿಲ್ಲಾಡಳಿತದ ಆದೇಶ ಖಂಡನೀಯವಾಗಿದ್ದು, ರೈತರಿಗೆ ತೊಂದರೆ ನೀಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷೆ ಹಾಜಿರಾಬಿ, ನಗರಾಧ್ಯಕ್ಷ ಪ್ರದೀಶ್ ಹಾಗೂ ನಗರ ಉಪಾಧ್ಯಕ್ಷೆ ರೋಹಿಣಿ ಉಪಸ್ಥಿತರಿದ್ದರು.








