ಮಡಿಕೇರಿ ಮಾ.20 NEWS DESK : ಅಂತರ ರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನಾಚರಣೆ ಅಂಗವಾಗಿ ಮಾ.21 ರಂದು ಕೊಡವ ನ್ಯಾಷನಲ್ ಸಂಘಟನೆ ವತಿಯಿಂದ ಕೊಡವ ಲ್ಯಾಂಡ್ ಗಾಗಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10.30 ಗಂಟೆಗೆ ಮೂರ್ನಾಡು ಬಲಂಬೇರಿಯ ರಸ್ತೆಯ ಚೇನಂಡ ಪೃಥ್ವಿ ಅವರ ಕಾಫಿ ಕ್ಯಾಸ್ಟಲ್ ಕೂರ್ಗ್ ನಲ್ಲಿ ವಿಚಾರ ಮಂಡನೆ ನಡೆಯಲಿದೆ ಎಂದು ಹೇಳಿದ್ದಾರೆ.
1956 ರಲ್ಲಿ ರಾಜ್ಯ ಪುನರ್-ಸಂಘಟನೆ ಕಾಯಿದೆ ಜಾರಿಗೆ ಬಂದಾಗಿನಿಂದ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಹುಸಂಖ್ಯಾತ ಸಮುದಾಯದವರು ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಕೊಡವ ಜನಾಂಗವನ್ನು ತಾರತಮ್ಯ ದೃಷ್ಟಿಯಿಂದ ನೋಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಡೆಗಣನೆ, ಅಗೌರವ ಮತ್ತು ಹಕ್ಕುಗಳಿಗೆ ಒಡ್ಡುತ್ತಿರುವ ಅಡೆತಡೆಗಳ ವಿರುದ್ಧ ನಿರಂತರ ಹೋರಾಟವನ್ನು ನಡೆಸುತ್ತಲೇ ಬಂದಿರುವ ಸಿಎನ್‍ಸಿ ಸಂಘಟನೆ ಕೊಡವರ ಮೇಲಿನ ತಾರತಮ್ಯ ನಿವಾರಣೆಗಾಗಿ ಶತ ಪ್ರಯತ್ನ ಮಾಡುತ್ತಿದೆ. ಕೊಡವರ ಕಾನೂನು ಬದ್ಧ ಹಕ್ಕುಗಳನ್ನು ಪಡೆಯಲು ಗುರುವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ನಾಚಪ್ಪ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.








