ಮಡಿಕೇರಿ ಏ.10 NEWS DESK : 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲಿ 5ನೇ ಸ್ಥಾನ ಗಳಿಸಿದೆ. 2023ರ ಫಲಿತಾಂಶಕ್ಕೆ ಹೋಲಿಸಿದರೆ, ಈ ಬಾರಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.1.58 ಹೆಚ್ಚಳವಾಗಿದೆಯೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಸಿ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 4578 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4216 ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ 804 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 671 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.83.46 ಫಲಿತಾಂಶ ದೊರಕಿದೆ. ವಾಣಿಜ್ಯ ವಿಭಾಗದಲ್ಲಿ 2351 ವಿದ್ಯಾರ್ಥಿಗಳಲ್ಲಿ 2196 ಮಂದಿ ಉತ್ತೀರ್ಣರಾಗಿ ಶೇ.93.41 ಫಲಿತಾಂಶ ದೊರಕಿದೆ. ವಿಜ್ಞಾನ ವಿಭಾಗದಲ್ಲಿ 1421 ವಿದ್ಯಾರ್ಥಿಗಳಲ್ಲಿ 1349 ಮಂದಿ ತೇರ್ಗಡೆಹೊಂದಿ ಶೇ.94.93 ಫಲಿತಾಂಶ ಲಭಿಸಿದೆ.
ಖಾಸಗಿ 385 ವಿದ್ಯಾರ್ಥಿಗಳಲ್ಲಿ 222 ಮಂದಿ ತೇರ್ಗಡೆಹೊಂದಿ ಶೇ.57.66 ಫಲಿತಾಂಶ ದಾಖಲಾಗಿದೆ. ಪುನರಾವರ್ತಿತ 140 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.50.71 ಫಲಿತಾಂಶ ದೊರಕಿದೆ.
ಕಲಾ ವಿಭಾಗದಲ್ಲಿ ಮಡಿಕೇರಿಯ ಸಂತ ಜೋಸೆಫರ ಪಿಯು ಕಾಲೇಜಿನ ಹೇಮಾವತಿ ಎಸ್. 574 ಅಂಕ ಪಡೆದು ಜಿಲ್ಲೆಗೆ ಪ್ರಥಮರಾಗಿದ್ದು, ಸಿದ್ದಾಪುರ ಇಕ್ರಾ ಪಿಯು ಕಾಲೇಜಿನ ಸಪ್ನಾ ಪಿ.ಐ. 572 ಅಂಕ ಗಳಿಸಿ ದ್ವಿತೀಯ ಹಾಗೂ ಮಡಿಕೇರಿ ಸಂತ ಜೋಸೆಫರ ಪಿ.ಯು. ಕಾಲೇಜಿನ ನಂದ ಎಸ್. 571 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಚರಿಷ್ಮಾ ಜಾನ್ಸನ್ 591 ಪ್ರಥಮ, ಗೋಣಿಕೊಪ್ಪಲುವಿನ ಸರ್ವದೈವತಾ ಪಿಯು ಕಾಲೇಜಿನ ರಷ್ಮಿತಾ ಕೆ. 589, ದ್ವಿತೀಯ ಪೊನ್ನಂಪೇಟೆಯ ಸಂತ ಅಂಥೋಣಿ ಪಿಯು ಕಾಲೇಜಿನ ಬಿಂದು ಐ. ಹಾಗೂ ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿ ಮರ್ಕಝ್ ಪಿಯು ಕಾಲೇಜಿನ ಜುವೇರಿಯಾ ಪಿ.ಝಡ್. ತಲಾ 588 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕೆಲರ ಪದವಿ ಪೂರ್ವ ಕಾಲೇಜಿನ ಡಿಯಾನ ನವೀನ್ ಎ. 592 ಅಂಕಗಳೊಂದಿಗೆ ಪ್ರಥಮ, ಇದೇ ಕಾಲೇಜಿನ ಜೀವನ್ ಡಿ.ಪಿ. ಮತ್ತು ಪೊನ್ನಂಪೇಟೆಯ ಹಳ್ಳಿಗಟ್ಟು ಸಿಇಟಿ ಪಿಯು ಕಾಲೇಜಿನ ಸಿಂಚು ಹೆಚ್.ಆರ್. ತಲಾ 588 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಎಂ.ಎಂ. ಕಾವೇರಮ್ಮ 586 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆಂದು ಉಪನಿರ್ದೇಶಕ ಪುಟ್ಟರಾಜು ಸಿ. ಮಾಹಿತಿ ನೀಡಿದ್ದಾರೆ.
ಉತ್ತಮ ಫಲಿತಾಂಶ ತಂದುಕೊಟ್ಟ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.








