
ಮಡಿಕೇರಿ ಏ.13 NEWS DESK: ಕೊಡವರ ಹೊಸ ವರ್ಷಾಚರಣೆ ಎಡಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಏ.14 ರಂದು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ವಸಂತಋತು ಫೆ.15 ರಿಂದ ಆರಂಭಗೊಂಡು ಏ.14 ಕ್ಕೆ ಕೊನೆಗೊಳ್ಳುವ “ಎಡಮ್ಯಾರ್” ನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಏ.14 ರಂದು ಸಂಜೆ 6.30ಗಂಟೆಗೆ ಗೋಣಿಕೊಪ್ಪಲಿನ ಶ್ರೀಉಮಾಮಹೇಶ್ವರಿ ದೇವಾಲಯದ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಆರ್‌ಎಂಸಿ ಯಾರ್ಡ್ ನಲ್ಲಿ ಕೊನೆಗೊಳ್ಳಲಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಅಂದು ಬೆಳಗ್ಗೆ 6ಗಂಟೆಗೆ ಮಡಿಕೇರಿ ತಾಲ್ಲೂಕಿನ ಮದೆನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಕೂಪದಿರ ಒಕ್ಕದ ಮೋಹನ್ ಅವರ ಭೂಮಿಯಲ್ಲಿ ಉಳುಮೆ ಮಾಡುವ ಮೂಲಕ “ಎಡಮ್ಯಾರ್” ಆಚರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.










