
ಸುಂಟಿಕೊಪ್ಪ,ಏ.16 NEWS DESK : ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ವಾರ್ಷಿಕೋತ್ಸವದ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಸಂಪ್ನಗೊಂಡಿತು.
ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೇಟ್ಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವಾಡಿಕೆಯಂತೆ ವೃತದಲ್ಲಿದ್ದು, ಸಾಂಪ್ರದಾಯಿಕ ಪೂಜೆ ವಿಧಿವಿಧಾನಗಳನ್ನು ನೆರವೇರಿಸಿದರು.
ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಲಾಯಿತು. ನಂತರ ಗ್ರಾಮದ ಜನತೆಯಿಂದ ಈಡು ಗಾಯಿ ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು ಯುವಕರು ಪಾಲ್ಗೊಂಡು ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು.
ದಿನದ ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ಮಂಜುನಾಥ ಶರ್ಮ ನೆರವೇರಿಸಿದರು.
ಸುತ್ತ ಮುತ್ತಲ್ಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.







