
ಸೋಮವಾರಪೇಟೆ NEWS DESK : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಹತ್ಯೆಗಳು ನಡೆಯುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಅಪರಾಧ ಪ್ರಕರಣಗಳು ಮಿತಿ ಮೀರಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರಪೇಟೆ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಾಲ್ನೂರು ಗ್ರಾಮದಲ್ಲಿ ಚುನಾವಣೆ ಪ್ರಚಾರದ ಸಂದರ್ಭ ಕಾರ್ಯಕರ್ತ ರಾಮಪ್ಪ ಅವರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಹುಬ್ಬಳಿ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪ್ರಧಾನಿ ಮೋದಿ ಅವರ ಕುರಿತು ಹಾಡು ಮಾಡಿದ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಗೌತಮ್, ಪ್ರಧಾನ ಕಾರ್ಯದರ್ಶಿ ದರ್ಶನ್ ಜೋಯಪ್ಪ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಪರಮೇಶ್, ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಡಿ.ಕೆ.ರವಿ, ಪಕ್ಷದ ಪ್ರಮುಖರಾದ ಲೋಕೇಶ್ವರಿ ಗೋಪಾಲ್, ಬಿ.ಜೆ.ದೀಪಕ್, ರೂಪ ಸತೀಶ್, ಸುಭಾಷ್ ತಿಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.








