
ವಿರಾಜಪೇಟೆ ಜೂ.22 NEWS DESK : ಯೋಗಾಭ್ಯಾಸವು ಎಲ್ಲಾ ಧರ್ಮಗಳಲ್ಲಿ, ಎಲ್ಲಾ ದೇಶದ ಜನರ ನಡುವೆ ಸಾಮರಸ್ಯವನ್ನು ಬೆಳೆಸುತ್ತದೆ ಎಂದು ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಎಂ.ಬಿ.ಪಾರ್ವತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಲೆಬೆಟ್ಟದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯೋಗ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿಯನ್ನು ವೃದ್ಧಿಸುತ್ತದೆ. ಜನರಲ್ಲಿ ಐಕ್ಯತೆ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ ಯೋಗವನ್ನು ಪ್ರತಿನಿತ್ಯ ಮಾಡುವುದರಿಂದ ಶ್ರದ್ಧೆ ಹಾಗೂ ಉತ್ತಮ ಆರೋಗ್ಯ ಬೆಳವಣಿಗೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಕನ್ನಡ ಉಪನ್ಯಾಸಕಿ ಪಿ.ಆರ್.ಸವಿತಾ ವಿದ್ಯಾರ್ಥಿಗಳಿಗೆ, ತ್ರಿಕೋನಾಸನ, ವಿತ್ಕಟಾಸನ ಪರಿವೃತ್ತ ತ್ರಿಕೋನಸನ, ಅರ್ಧ ಚಕ್ರಾಸನ, ವೀರಭದ್ರಸನ ಹಾಗೂ ಸೂರ್ಯ ನಮಸ್ಕಾರವನ್ನು ಮಾಡಿಸಿದರು.
ಈ ಸಂದರ್ಭ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಪಿ.ಆರ್.ಶಿವದಾಸ್, ಉಪನ್ಯಾಸಕಿ ಕೆ.ಕೆ.ಸುನಿತ ಸೇರಿದಂತೆ ಎಲ್ಲಾ ಉಪನ್ಯಾಸಕರು, ಕಚೇರಿ ಸಿಬ್ಬಂದಿ ಶಾಲಿನಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.








