
ಮಡಿಕೇರಿ NEWS DESK ಆ.5 : ಕೊಡಗು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಆ.7ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಇನ್ನೂ ಕೂಡ ಕೊಡಗು ಜಿಲ್ಲೆಯ ಮೂಲ ನಿವಾಸಿಗಳು, ಬಡವರ್ಗದವರಿಗೆ ಮೂಲಭೂತ ಸೌಕರ್ಯಗಳು ಲಭಿಸಿಲ್ಲ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ತಿಂಗಳ ಕಾಲ ಮಳೆಗಾಲ ಇರುತ್ತದೆ. ಈ ಸಂದರ್ಭದಲ್ಲಿ ಸಾವನ್ನಪ್ಪುವವರ ಶವ ಸಂಸ್ಕಾರಕ್ಕೆ ಅಗ್ತಯವಾಗಿ ಬೇಕಾಗುವ ಕಟ್ಟಿಗೆಗಳು ಸಿಗುವದಿಲ್ಲ. ಬೇಸಿಗೆಯಲ್ಲಿಯೂ ಕಟ್ಟಿಗೆಗಳ ಅಭಾವವಿರುತ್ತದೆ. ಅರಣ್ಯ ಪ್ರದೇಶದಿಂದ ಕಟ್ಟಿಗೆ ತರಲು ಅರಣ್ಯ ಇಲಾಖೆಯ ಅಭ್ಯಂತರವಿರುತ್ತದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಈ ಬಗ್ಗೆ ಜಿಲ್ಲೆಯ ಯಾವದೇ ಜನಪ್ರತಿನಿಧಿಗಳಾಗಿ, ಅದಿಕಾರಿಗಳಾಗಿ ಇದುವರೆಗೆ ಗಮನ ಹರಿಸಿಲ್ಲ. ಈ ಬಗ್ಗೆ ಪಕ್ಷದ ವತಿಯಿಂದ ಕಳೆದ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಕೂಡ ಸಲ್ಲಿಸಲಾಗಿತ್ತು. ಆದರೂ ಇದುವರೆಗೆ ಯಾವದೇ ಸ್ಪಂದನ ದೊರೆತಿಲ್ಲವೆಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಆಟ್ರಂಗಡ ದಿವಿಲ್‌ಕುಮಾರ್ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಳ್ಳೀರ ಹರೀಶ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾ.7ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಎಲ್‌ಐಸಿ ಕಚೇರಿ ಬಳಿ ಇರುವ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಕಚೇರಿ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಅಣಕು ಶವಯಾತ್ರೆಯೊಂದಿಗೆ ಕಾಲ್ನಡಿಗೆ ಮೂಲಕ ತೆರಳಿ ಮಾನವ ಸರಪಳಿ ರಚನೆ ಮಾಡಿ ಪ್ರತಿಭಟಿಸಲಾಗುವದು. ನಂತರ ಬೇಡಿಕೆಯನ್ನೊಳಗೊಂಡ ಮನವಿಯನ್ನು ಜಿಲ್ಲಾದಿಕಾರಿಗಳಿಗೆ ಸಲ್ಲಿಸಲಾಗುವದೆಂದು ಅವರುಗಳು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಪುತ್ರಿ ರೇವತಿರಾಜ್, ರಾಜ್ಯ ಪದಾಧಿಕಾರಿಗಳಾದ ಎಂ.ಎಂ.ರಾಜು, ಚೇತನ್‌ಕುಮಾರ್ ಸೇರಿದಂತೆ ಬೆಂಗಳೂರು, ಮೈಸೂರು ಜಿಲ್ಲಾ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

::ಸಾಂದರ್ಭಿಕ ಚಿತ್ರ::







