
ಮಡಿಕೇರಿ NEWS DESK ನ 24. ರಾಷ್ಟ್ರಕವಿ ರಸಋಷಿ ಕುವೆಂಪು ಅವರು ರಚಿಸಿದ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಈ ಗೀತೆಗೆ ನೂರು ಪರುಷ ತುಂಬಿದೆ. 1924 ರಲ್ಲಿ ಕುವೆಂಪು ಅವರು ಈ ಗೀತೆಯನ್ನು ರಚಿಸಿದ್ದು, ಭಾರೀ ಜನಮನ್ನಣೆ ಗಳಿಸಿದೆ. ಕರ್ನಾಟಕ ಸರಕಾರ ಈ ಗೀತೆಯನ್ನು ನಾಡಗೀತೆ ಎಂದು ಘೋಷಿಸಿತು. ನಂತರ ಸರಕಾರಿ ಮತ್ತು ಸರಕಾರೇತರ ಕಾರ್ಯಕ್ರಮಗಳಲ್ಲಿ ಈ ಗೀತೆ ಹಾಡುವುದು ಕಡ್ಡಾಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಬಹಳ ಹಿಂದಿನಿಂದಲೇ ಈ ಗೀತೆಯನ್ನು ತನ್ನ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಬಂದಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಾಡಗೀತೆಯ 100ನೇ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಿದೆ. ಡಿಸೆಂಬರ್ 29ರಂದು ಕುವೆಂಪು ಅವರ ಜನ್ಮದಿನದಂದು ಮಡಿಕೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ನಾಡಗೀತೆ ಗಾಯನ ಸ್ಪರ್ಧೆ, ನಾಡಗೀತೆ ವಿಶ್ಲೇಷಣೆ, ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








