
ಮಡಿಕೇರಿ ನ.25 NEWS DESK : ದುಬೈಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 12ನೇ ಬ್ರೈನೋಬ್ರೈನ್ ಚಾಂಪಿಯನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅಲುಫ್ ಎ.ಆರ್ (9) ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾನೆ. ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ 18 ದೇಶಗಳ 2036 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯದಿಂದ ಐವರು ಸ್ಪರ್ಧಿಸಿದ್ದು, ಇವರಲ್ಲಿ ಅಲುಫ್ ಎ.ಆರ್ ಒಬ್ಬರಾಗಿದ್ದರು. ಮಾಪಂಗಡ ಕವಿತಾ ಕರುಂಬಯ್ಯ ಅವರ ಮಡಿಕೇರಿಯ ಬ್ರೈನೋಬ್ರೈನ್ ಅಬಾಕಾಸ್ ಸಂಸ್ಥೆಯಲ್ಲಿ ಅಲುಫ್ ಎ.ಆರ್ ತರಬೇತಿ ಪಡೆಯುತ್ತಿದ್ದಾನೆ. ಈತ ಉದ್ಯಮಿ ರಫೀಕ್ ಹಾಗೂ ಸಬೀನ ದಂಪತಿಯ ಪುತ್ರನಾಗಿದ್ದು, ಮಡಿಕೇರಿಯ ಸಂತ ಮೈಕಲರ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ರೈನೋಬ್ರೈನ್ ಅಂತರಾಷ್ಟ್ರೀಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಳ್ ಸುಬ್ರಹ್ಮಣ್ಯಂ ಉಪಸ್ಥಿತರಿದ್ದು, ಅಲುಫ್ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.










