
ಮಡಿಕೇರಿ ಜ.22 NEWS DESK : ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆ ಹಿನ್ನಲೆ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಜ.24 ರಂದು ಮಡಿಕೇರಿಯಲ್ಲಿ ರಕ್ತ ಸಂಗ್ರಹಣಾ ಶಿಬಿರ ನಡೆಯಲಿದೆ. ನಗರದ ರೋಟರಿ ಸಭಾಂಗಣದಲ್ಲಿ ಬೆಳಗ್ಗೆ 8.45 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಔಷಧಿ ವ್ಯಾಪಾರಸ್ಥರ ಸಂಘದ ಸದಸ್ಯರು ರಕ್ತ ದಾನ ಮಾಡಲಿದ್ದಾರೆ. ಶಿಬಿರವನ್ನು ಜಿಲ್ಲಾ ಔಷಧಿ ಇಲಾಖೆಯ ನಿಯಂತ್ರಕ ಅಧಿಕಾರಿ ಗುರುನಾಥ್ ಮಗನಗೇರಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ. ಕೆ.ಪಿ.ಕರುಂಬಯ್ಯ, ಪತ್ರಕರ್ತ ಅನಿಲ್ ಹೆಚ್.ಟಿ. ಪಾಲ್ಗೊಳ್ಳಲಿದ್ದಾರೆ. ಸಂಘದ ಜಿಲ್ಲಾ ಅಧ್ಯಕ್ಷ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಂಬೇಕಲ್ ಜೀವನ್ ಕುಶಾಲಪ್ಪ, ಜಿಲ್ಲಾ ಖಜಾಂಚಿ ಪ್ರಸಾದ್ ಗೌಡ, ಶಿಬಿರ ಸಂಚಾಲಕ ವಸಂತ್ ಕುಮಾರ್ ಹಾಜರಿರುತ್ತಾರೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಐ.ಪುರುಷೋತ್ತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









