
ಮಡಿಕೇರಿ ಜ.25 NEWS DESK : ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಜಾಲದ ಬಲವರ್ಧನೆಗೆ ಸಂಬಂಧಿಸಿದಂತೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅನುಮೋದನೆಗೊಂಡಿರುವ ಯೋಜನೆಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಬಳಿ ಇರುವ ಹೆಗ್ಗಡೆ ಸಮಾಜದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಂ.ರಾಮಚಂದ್ರ, ವಿವಿಧ ಇಲಾಖಾ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಹಾಗೂ ಮಡಿಕೇರಿ ತಾಲ್ಲೂಕಿನ ಭಾಗಶಃ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ :: ಅವಶ್ಯಕತೆ ಇರುವಲ್ಲಿ ಹಳೆಯ ವಿದ್ಯುತ್ ವಾಹಕವನ್ನು ಬದಲಾಯಿಸಿ ಕವರ್ಡ್ ಕಂಡಕ್ಟರ್ ಅಳವಡಿಕೆ,
ಮಳೆಗಾಲದಲ್ಲಿ ವಿದ್ಯುತ್ ಅಡಚಣೆಯನ್ನು ಮಿತಗೊಳಿಸಲು ಕಾಡಂಚಿನಲ್ಲಿರುವ ವಿದ್ಯುತ್ ಮಾರ್ಗವನ್ನು ಅವಶ್ಯವಿರುವಲ್ಲಿ ರಸ್ತೆ ಬದಿಗೆ ಅಳವಡಿಸುವುದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ನೀಡಲು ಅವಶ್ಯವಿರುವ ಕಡೆ ಹೆಚ್ಚುವರಿ ಪರಿವರ್ತಕವನ್ನು ಅಳವಡಿಸುವುದು, ಜನನಿಬಿಡ ಹಾಗೂ ಅಪಾಯದಂಚಿನಲ್ಲಿರುವ ವಿದ್ಯುತ್ ಮಾರ್ಗಗಳಿಗೆ ಎಲ್.ಟಿ AB ಕೇಬಲ್ ಅಳವಡಿಸುವುದು, ವಿದ್ಯುತ್ ಮಾರ್ಗದಲ್ಲಿರುವ ಹಳೆಯ ಕಬ್ಬಿಣದ ಕಂಬಗಳ ಬದಲಾವಣೆ ಮಾಡುವುದು.










