
ವಿರಾಜಪೇಟೆ ಜ.27 NEWS DESK : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಸಂಸ್ಥೆಯ ನಿರ್ದೇಶಕರಾದ ಕೊಮ್ಮೆತೋಡಿನ ಪೊಯಕೆರ ಎಸ್.ರಫೀಕ್ (ಕೊಡವ ಮುಸ್ಲಿಂ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ದಿ.ಸಾದುಲಿ ಹಾಜಿಯವರ ಪುತ್ರ) ಅವರು ಪ್ರಾಯೋಜಿಸಿರುವ ಸಾಂಪ್ರದಾಯಿಕ ದಫ್ ಅನ್ನು ಸಂಸ್ಥೆಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಅಕ್ಕಳತಂಡ ಎಸ್.ಮೊಯ್ದು ಅವರ ಆತಿಥ್ಯದಲ್ಲಿ ಕಾಟ್ರಕೊಲ್ಲಿಯಲ್ಲಿ ನಡೆದ ಕೆಎಂಎ ದಫ್ ರಾತೀಬ್‍ನ ಸದಸ್‍ನಲ್ಲಿ ಪೊಯಕೆರ ರಫೀಕ್ ದಫನ್ನು ಸಾಂಕೇತಿಕವಾಗಿ ಕೆ.ಎಂ.ಎ.ಗೆ ಹಸ್ತಾಂತರಿಸಿದರು. ಇದನ್ನು ಸಂಸ್ಥೆಯ ಪರವಾಗಿ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ, ಹಿರಿಯ ಉಪಾಧ್ಯಕ್ಷ ಡಾ.ಜೋಯಿಪೆರ ಕುಂಜ್ಹಬ್ದುಲ್ಲಾ, ಉಪಾಧ್ಯಕ್ಷ ಅಕ್ಕಳತಂಡ ಎಸ್.ಮೊಯ್ದು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳೊಂದಿಗೆ ನಲ್ವತ್ತೋಕ್ಲಿನ ರಿಫಾಯಿ ರಾತೀಬ್ ಸಂಘದ ಖಲೀಫರ ಮತ್ತು ಸದಸ್ಯರ ಸಮ್ಮುಖದಲ್ಲಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೂಫಿ ಹಾಜಿ, ಹಿಂದಿನಿಂದಲೂ ಕೊಡವ ಮುಸ್ಲಿಮರು ದಫ್ ರಾತೀಬನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕುರಿತು ಜನರಿಗಿರುವ ನಂಬಿಕೆ ಮಹತ್ತರವಾದದ್ದು. ದಫ್ ಕೇವಲ ಧಾರ್ಮಿಕ ಪರಿಕರ ಮಾತ್ರವಲ್ಲದೆ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ದಫ್ ಮತ್ತು ರಾತೀಬ್ ನ ಅಸ್ಮಿತೆಯನ್ನು ಕಾಪಾಡಿಕೊಳ್ಳುವಲ್ಲಿ ಕೊಡವ ಮುಸ್ಲಿಮರ ಪಾತ್ರ ಅಪಾರವಾದದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆಎಂಎ ಕಾರ್ಯಕಾರಿ ಸಮಿತಿಯ ಹಿರಿಯ ನಿರ್ದೇಶಕ ಪುದಿಯತ್ತಂಡ ಹೆಚ್.ಶಂಸುದ್ದೀನ್, ಚಿಮ್ಮಿಚ್ಚಿರ ಕೆ.ಇಬ್ರಾಹಿಂ ಹಾಜಿ, ಕುಪ್ಪಂದಿರ ಕೆ.ಯೂಸುಫ್ ಹಾಜಿ, ಪುಡಿಯಂಡ ಶಾದುಲಿ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.









