
ನಾಪೋಕ್ಲು ಜ.27 NEWS DESK : ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಧ್ವಜಾರೋಹಣ ನೆರವೇರಿಸಿದರು. ವಿದ್ಯಾಸಂಸ್ಥೆ ಉಪಾಧ್ಯಕ್ಷ ನೆರವಂಡ ಸುನಿಲ್ ದೇವಯ್ಯ ಮಾತನಾಡಿ, ಪ್ರತಿಯೊಬ್ಬರು ಪ್ರತಿದಿನ ಸಂವಿಧಾನದ ವಿಶೇಷತೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಪ್ರಾಂಶುಪಾಲರಾದ ಬಿ.ಎಂ.ಶಾರದ ಮಾತನಾಡಿ, ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಬೆಳೆಯಲು ಸಾಧ್ಯ ಎಂದರು. ಶಿಕ್ಷಕಿ ಸಿ.ಕೆ.ಲೀನಾ ಮಾತನಾಡಿ, ದೇಶದ ಸಂವಿಧಾನದ ರಕ್ಷಣೆಗಾಗಿ ದುಡಿದ ಪ್ರತಿಯೊಬ್ಬರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಚೌರಿರ ಮಂದಣ್ಣ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವರದಿ : ದುಗ್ಗಳ ಸದಾನಂದ









