ಮಡಿಕೇರಿ NEWS DESK ಜ.28 : ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಕೊಡಗು ಜಿಲ್ಲಾ ಪೊಲೀಸ್ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ದುಷ್ಕೃತ್ಯ ಎಸಗಿದವರನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟೆಮಾಡು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನ ನಡೆದಿದೆ. ಈ ಹಂತದಲ್ಲಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲವೆಂದರು. ಪ್ರಧಾನ ಅರ್ಚಕರ ಮನೆಗೆ ಸೋಮವಾರ ಸಂಜೆ ತೆರಳಿದ ಇಬ್ಬರು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಟ್ಟೆಮಾಡು ಪ್ರಕರಣವನ್ನು ಬಳಸಿಕೊಂಡು ದುಷ್ಕರ್ಮಿಗಳು, ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನಗಳಿಗೆ ಮುಂದಾದಲ್ಲಿ ಅವರನ್ನು ಕ್ರಿಮಿನಲ್‌ಗಳೆಂದು ಪರಿಗಣಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಪ್ರತಿಭಟನೆ ಎಲ್ಲರ ಹಕ್ಕು- ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಜನಾಂಗದವರು ಪ್ರತಿಭಟನೆ ಅದಾಗಲೆ ನಡೆಸಿದ್ದು, ಮತ್ತೊಂದು ಜನಾಂಗ ಬಾಂಧವರು ಫೆ.2 ರಿಂದ ಜಾಥ ಹೊರಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಎಸ್‌ಪಿ ರಾಮರಾಜನ್, ಪ್ರತಿಭಟನೆ ಎನ್ನುವುದು ಪ್ರತಿಯೊಬ್ಬರ ಹಕ್ಕು. ಅವರವರ ಭಾವನೆಗಳನ್ನು ವ್ಯಕ್ತಪಡಿಸಲು ನಾಲ್ಕೈದು ಮಂದಿ ಇದ್ದರು ಅಂತಹವರಿಗೆ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ. ಮತ್ತೊಂದು ಜನಾಂಗ ಬಾಂಧವರು ತಮ್ಮ ಜಾಥವನ್ನು ಶಾಂತಿಯುತವಾಗಿ ನಡೆಸಬೇಕೆಂದು ಹೇಳಿದರು. ಜಾಥ ಮೊದಲಾದವುಗಳ ಸಂದರ್ಭ ನೂರಾರು ಮಂದಿ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಬೇಕಾಗುತ್ತದೆ. ಇದರಿಂದ ವಿವಿಧ ಅಪರಾಧ ಪ್ರಕರಣಗಳ ಪತ್ತೆ ಕಾರ್ಯ ವಿಳಂಬವಾಗುತ್ತದೆ ಎಂದು ಎಸ್‌ಪಿ ತಿಳಿಸಿದರು.








