
ವಿರಾಜಪೇಟೆ ಫೆ.12 NEWS DESK : ಸಮಾಜದಲ್ಲಿ ಇಂದು ನೆಮ್ಮದಿಯಿಂದ ಬದುಕಲು ಪರಸ್ಪರ ಸೌಹಾರ್ದತೆ ಅಗತ್ಯ. ಜನರು ತಮ್ಮ ತಮ್ಮ ಧರ್ಮಗಳ ಮೂಲ ಆಶಯಗಳನ್ನು ಅರಿತುಕೊಂಡರೆ ದ್ವೇಷಗಳಿಗೆ ಅವಕಾಶವೇ ಇರುವುದಿಲ್ಲ. ದ್ವೇಷ ಸಂಪೂರ್ಣವಾಗಿ ದೂರವಾದರೆ ಸಹಜವಾಗಿ ಸೌಹಾರ್ದತೆ ಮೂಡುತ್ತದೆ. ಸೌಹಾರ್ತೆಯಿಂದ ಮಾತ್ರ ಸರ್ವ ಜನಾಂಗದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.)ನ ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಅಭಿಪ್ರಾಯಪಟ್ಟರು. ಇತಿಹಾಸ ಪ್ರಸಿದ್ಧ ಅಂಬಟ್ಟಿ ಮಖಾಂ ಉರೂಸ್ ನ ಪ್ರಮುಖ ದಿನದ ಅಂಗವಾಗಿ ಮಖಾಂ ಆವರಣದಲ್ಲಿ ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಕೋಮು ಸೌಹಾರ್ದತೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ಉರೂಸ್ ಗಳ ಪಾತ್ರ ಮಹತ್ವದ್ದಾಗಿದೆ. ಸೂಫಿ ಸಂತರ ಹೆಸರಿನಲ್ಲಿ ನಡೆಯುವ ಜಿಲ್ಲೆಯ ಎಲ್ಲಾ ಉರೂಸ್ ಗಳು ಮನುಷ್ಯ ಸ್ನೇಹದ ಮೂಲಕ ಎಲ್ಲ ಧರ್ಮದ ಜನರನ್ನು ಪರಸ್ಪರ ಒಗ್ಗೂಡಿಸುವಲ್ಲಿ ದೊಡ್ಡ ಕೊಡುಗೆಗಳನ್ನು ನೀಡುತ್ತಿದೆ ಎಂದು ಹೇಳಿದರು. ಧಾರ್ಮಿಕ ಆಚರಣೆಯಾಗಿರುವ ಉರೂಸ್ ಗಳು ಸಂವಿಧಾನದ ಮೂಲ ಆಶಯವಾದ ಸರ್ವರೂ ಸಮಾನರು ಎಂಬ ಅಂಶಕ್ಕೆ ಪೂರಕವಾಗಿದೆ. ಜೊತೆಗೆ ವರ್ಗ ರಹಿತ, ಜಾತ್ಯತೀತ ನಿಲುವಿಗೆ ಆಸರೆಯಂತಿದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬೇರೆ ಬೇರೆ ಕಾರಣಗಳಿಂದ ಮನುಷ್ಯ ಮನಸ್ಸುಗಳ ಮಧ್ಯೆ ಕಂದಕಗಳು ಸೃಷ್ಟಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಸಹೋದರತೆಯ ಸಂದೇಶ ಸಾರಲು ಕೊಡಗಿನ ಉರೂಸ್ ಗಳು ಪ್ರೇರಣಾದಾಯಕವಾಗಿದೆ ಎಂದು ಹೇಳಿದ ಸೂಫಿ ಹಾಜಿ, ದಕ್ಷಿಣ ಕೊಡಗಿನಲ್ಲಿ ಎಲ್ಲ ಧರ್ಮಿಯರ ಸಂಗಮಕ್ಕೆ ವೇದಿಕೆಯಾಗಿರುವ ಅಂಬಟ್ಟಿ ಉರೂಸ್ ಜನ ಸಮುದಾಯಕ್ಕೆ ನೀಡುತ್ತಿರುವ ಭಾವೈಕ್ಯತೆಯ ಸಂದೇಶ ಇಂದಿನ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ತಿಳಿಸಿದರು. ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಹೆಸರಾಂತ ಯುವ ವಿದ್ವಾಂಸರಾದ ನೌಫಲ್ ಸಖಾಫಿ ಕಳಸ, 12ನೇ ಶತಮಾನದಲ್ಲಿ ಭಾರತವನ್ನು ಪ್ರವೇಶಿಸಿ 13ನೇ ಶತಮಾನದಲ್ಲಿ ಜನಪ್ರಿಯತೆಯನ್ನು ಗಳಿಸಿದ ಸೂಫಿ ಸಂತರು ವಿಶಾಲ ದೃಷ್ಟಿಕೋನದ ಜಾತ್ಯತೀತ ತತ್ವವನ್ನು ಪಸರಿಸಿದರು. ಮನುಷ್ಯತ್ವದ ನಿಜವಾದ ಧಾರ್ಮಿಕತೆಯನ್ನು ಪ್ರತಿಪಾದಿಸುವ ಮೂಲಕ ಜನಸಾಮಾನ್ಯರಲ್ಲಿ ಸೌಹಾರ್ದತೆಯ ಜಾಗೃತಿ ಮೂಡಿಸಿ ಭಾವೈಕ್ಯತೆ ಬೆಳೆಸುವಲ್ಲಿ ಸೂಫಿ ಸಂತರ ಆಶಯಗಳು ಪ್ರಮುಖವಾಗಿದೆ. ಸೂಫಿ ಸಂತರು ತಳ ಸಮುದಾಯದ ಜನರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ವಿಸ್ತರಿಸುವ ಮೂಲಕ ಕೋಮು ಸಾಮರಸ್ಯಕ್ಕೆ ಬಲವಾದ ಅಡಿಪಾಯ ಕಲ್ಪಿಸಿದರು ಎಂದು ತಿಳಿಸಿದರು.ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎ. ಹಂಸ, ಜಾತ್ಯತೀತ ಆಶಯದಲ್ಲಿ ವರ್ಷಪ್ರತಿ ನಡೆಯುವ ಉರೂಸ್ ಗಳು ಮನುಷ್ಯ ಪ್ರೀತಿಗೆ ಬಹುದೊಡ್ಡ ನಿದರ್ಶನವಾಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಿ.ಎ.ಹನೀಫ್ ಮಾತನಾಡಿ, ಸೂಫಿ ಸಂತರು ಪ್ರತಿಪಾದಿಸಿದ ಮಾನವೀಯತೆಯ ತತ್ವಗಳು ಉರೂಸ್ ಆಚರಣೆಯ ಮೂಲಕ ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಪೆರುಂಬಾಡಿಯ ಶಂಸುಲ್ ಉಲಮ ಎಜುಕೇಶನ್ ಅಕಾಡೆಮಿಯ ಮುಖ್ಯಸ್ಥ ಸಿ.ಪಿ.ಎಂ.ಬಶೀರ್ ಹಾಜಿ ಮಾತನಾಡಿ, ಮತಸೌಹಾರ್ದತೆ ಮನುಷ್ಯ ಸ್ನೇಹಕಿಂತಲೂ ದೊಡ್ಡದು. ಮತಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸಿ ಬಹುತ್ವದ ಧಾರ್ಮಿಕ ಸ್ವಯತತೆಯನ್ನು ಗಟ್ಟಿಗೊಳಿಸುವಲ್ಲಿ ಉರೂಸ್ ಗಳ ಪಾತ್ರ ಅಪಾರವಾದದ್ದು ಎಂದು ವ್ಯಾಖ್ಯಾನಿಸಿದರು. ಅಂಬಟ್ಟಿ ಜುಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಎ.ಹೆಚ್.ಶಾದುಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಪುರಸಭಾ ಸದಸ್ಯರಾದ ರಾಫಿ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ರಫೀಕ್ ಸಹದಿ, ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾದ ಕೋಳುಮಂಡ ರಫೀಕ್, ಜಮಾಅತ್ ನ ಮಾಜಿ ಅಧ್ಯಕ್ಷರಾದ ಕೆ.ಎ.ಯೂಸುಫ್, ಕೋಶಾಧಿಕಾರಿ ಖಾಲಿದ್ ಉಸ್ತಾದ್, ಹಿರಿಯರಾದ ಕೆ.ಎ.ಆಲಿ, ನಿವೃತ್ತ ಸೈನಿಕರಾದ ಎಂ.ಕೆ.ಮುಸ್ತಫಾ, ಪ್ರಮುಖರಾದ ಸನಾವುಲ್ಲಾ ಖಾನ್, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಪೆರುಂಬಾಡಿಯ ಎಸ್ ಇ ಎ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಇಸ್ಮಾಯಿಲ್ ಮುಸ್ಲಿಯಾರ್ ನೇತೃತ್ವ ನೀಡಿದರು. ಕಿಕ್ಕರೆ ಶರೀಫ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ ಆಡಳಿತ ಮಂಡಳಿ ಕಾರ್ಯದರ್ಶಿ ಶಾನು ವಂದಿಸಿದರು. ಜಿಲ್ಲೆಯ ಮತ್ತು ಹೊರ ಜಿಲ್ಲೆಯಿಂದ ಪಾಲ್ಗೊಂಡಿದ್ದ ಸಾವಿರಾರು ಸಂಖ್ಯೆಯ ಭಕ್ತ ಸಮೂಹಕ್ಕೆ ಸಾಮೂಹಿಕ ಅನ್ನ ಸಂತರ್ಪಣೆ ಮಾಡುವ ಮೂಲಕ ಈ ವರ್ಷದ ಅಂಬಟ್ಟಿ ಉರೂಸ್‍ಗೆ ತೆರೆ ಬಿತ್ತು.









