
ಮಡಿಕೇರಿ ಫೆ.17 NEWS DESK : ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು ಎಂದು ಒತ್ತಾಯಿಸಿ ವಿಶ್ವ ರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಫೆ.21 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಗ್ಗೆ 10.30 ಗಂಟೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಹೇಳಿದ್ದಾರೆ. ಯುನೇಸ್ಕೋದ 2025 ರ ಘೋಷವಾಕ್ಯದಂತೆ ಲ್ಯಾಂಗ್ವೇಜ್ ಮ್ಯಾಟರ್ : ಸ್ವಿಲ್ವರ್ ಜುಬಿಲಿ ಸೆಲಬ್ರೇಷನ್ ಆಫ್ ಇಂಟರ್ ನ್ಯಾಷನಲ್ ಮದರ್ ಲ್ಯಾಂಗ್ವೇಜ್-ಡೇ” ಮಾರ್ಕಿಂಗ್ ದ 25 ಆನಿವರ್ಷರಿ ಅಂಡ್ ಹೈಲೆಟಿಂಗ್ ಲಿಂಗ್ವಿಸ್ಟಿಕ್ ಡೈವರ್ಸಿಟಿ ಆಂಡ್ ಪ್ರಮೋಷನ್ ಆಫ್ ಮದರ್ ಟಂಗ್ಸ್ ಈ ಬಾರಿಯ ಮಹತ್ವವಾಗಿದೆ. ಕೊಡವ ಭಾಷೆ, ಪ್ರಕೃತಿಯ ಆರಾಧಕರಾಗಿರುವ ಆದಿಮಸಂಜಾತ ಕೊಡವರ ಮಾತೃಭಾಷೆಯಾಗಿದ್ದು, ಜೀವನದ ಆತ್ಮವಾಗಿದೆ. ಜನ್ಮ ನೀಡಿದ ತಾಯಿ, ಮಾತೃಭಾಷೆ ಕೊಡವ, ಮಾತೃಭೂಮಿ ಕೊಡವ ಲ್ಯಾಂಡ್, ಜಲ ಮಾತೆ ಕಾವೇರಿ ಮತ್ತು ಪ್ರಕೃತಿ ಮಾತೆಯಿಂದ ಕೊಡವ ಜನಜೀವನವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ 8ನೇ ಶೆಡ್ಯೂಲ್‍ಗೆ ಕೊಡವ ಭಾಷೆಯನ್ನು ಸೇರಿಸಬೇಕು. ಸಂವಿಧಾನದ 347, 350, 350ಎ, 350ಬಿ ಅನುಚ್ಛೇದಗಳು ಆದಿಮಂಸಜಾತ ಕೊಡವ ಜನಾಂಗದ ಮಾತೃಭಾಷೆಯಾದ ಕೊಡವ ತಕ್ ನಂತಹ ಸೂಕ್ಷ್ಮ ಭಾಷೆಯ ಪ್ರಚಾರ, ರಕ್ಷಣೆ, ಸಂರಕ್ಷಣೆಗೆ ಸಂಬಂಧಿಸಿದಂತೆ ಅನ್ವಯವಾಗುವಂತೆ ಮಾಡಬೇಕು. ಕೊಂಕಣಿ ಭಾಷೆಗೆ ಸಮಾನವಾಗಿ ಕೊಡವ ತಕ್ ಅನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮತ್ತು ಕೊಡಗಿನ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಯುನೆಸ್ಕೋದ ಇಂಟಾಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಕೊಡವ ಭಾಷೆ, ಸಂಸ್ಕೃತಿಯನ್ನು ಸೇರಿಸಬೇಕು, 1ನೇ ತರಗತಿಯಿಂದ ಪದವಿ ಹಂತದವರೆಗೆ ಪಠ್ಯಕ್ರಮದಲ್ಲಿ ಕೊಡವ ಭಾಷೆಯನ್ನು ಕಡ್ಡಾಯಗೊಳಿಸಬೇಕು. ರಾಜ್‍ಗಿರ್ನಲ್ಲಿರುವ ಪ್ರಾಚೀನ ನಳಂದಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ, ಟೋಕಿಯೊದ ಯುಎನ್ ವಿಶ್ವವಿದ್ಯಾಲಯ, ಅಮರಕಂಟಕ್‍ನಲ್ಲಿರುವ ಇಂದಿರಾಗಾಂಧಿ ಬುಡಕಟ್ಟು ವಿಶ್ವವಿದ್ಯಾಲಯ, ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಮತ್ತು ತಿರುವನಂತಪುರಂನಲ್ಲಿರುವ ದ್ರಾವಿಡಿಯನ್ ಲ್ಯಾಂಗುಗೇ ಸಂಶೋಧನಾ ಸಂಸ್ಥೆಯಲ್ಲಿ ಕೊಡವ ಭಾಷಾ ಬೆಂಚ್ ಅನ್ನು ಸ್ಥಾಪಿಸಬೇಕು. ಕೊಡಗಿನಲ್ಲಿ ವಿಶ್ವ ಕೊಡವಾಲಜಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಕೊಡವ ಭಾಷೆಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಬೇಕು. ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಬುಡಕಟ್ಟು ಜನಾಂಗದ ಗನ್ ಸಂಸ್ಕಾರವನ್ನು ಸಿಖ್ಖರ ಕಿರ್ಪಾನ್‍ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26 ರಡಿಯಲ್ಲಿ ರಕ್ಷಿಸಬೇಕು. ಕೊಡವ ಭಾಷೆ ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಜನಾಂಗಕ್ಕೆ ಎಸ್‍ಟಿ ಟ್ಯಾಗ್‍ನೊಂದಿಗೆ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು ಎಂದು ಧರಣಿ ಸಂದರ್ಭ ಒತ್ತಾಯಿಸುವುದಾಗಿ ನಾಚಪ್ಪ ತಿಳಿಸಿದ್ದಾರೆ.









