
ಮಡಿಕೇರಿ ಫೆ.19 NEWS DESK : ಕಳೆದ ಎರಡು ದಶಕಗಳ ನಿರಂತರ ಪರಿಶ್ರಮದಿಂದ ಪಡೆದುಕೊಂಡ ‘ಕೊಡಗು ವಿಶ್ವ ವಿದ್ಯಾನಿಲಯ’ಯನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು, ತಪ್ಪಿದಲ್ಲಿ ಕೊಡಗು ಬಂದ್ ನಂತಹ ಹೋರಾಟಕ್ಕೂ ಸಿದ್ಧವಿರುವುದಾಗಿ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರಲ್ಲಿ ತಾನು ಶಾಸಕನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರು ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯನಾಗಿ ಮೂರು ಅವಧಿ ಕಾರ್ಯ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ವಿಶ್ವ ವಿದ್ಯಾಲಯದ ಸ್ಥಾಪನೆಯ ವಿಚಾರವನ್ನು ಮಂಡಿಸುತ್ತಲೆ ಬಂದಿದ್ದೆ. ಇದರ ಫಲಸ್ವರೂಪವಾಗಿ 2010ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಿಕ್ಕಅಳುವಾರದಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಭೂಮಿಪೂಜೆ ನೆರವೇರಿಸಿ 15 ಕೋಟಿ ರೂ. ಅನುದಾನವನ್ನು ಒದಗಿಸಿದ್ದರು. ನಮ್ಮ ನಿರೀಕ್ಷೆಯಂತೆ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೊಡಗನ್ನು ಒಳಗೊಂಡಂತೆ ರಾಜ್ಯದಲ್ಲಿ 10 ನೂತನ ವಿವಿಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದರು. ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಚಿಕ್ಕಾಸನ್ನು ನೀಡದಿದ್ದರು ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೊಡಗು ವಿವಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಕೊಡಗು ವಿವಿ 25 ಕಾಲೇಜುಗಳನ್ನು ಹೊಂದಿದ್ದು, ಪ್ರಥಮ ವರ್ಷದ ಪದವಿ ತರಗತಿಗಳಲ್ಲಿ 2050, ದ್ವಿತೀಯ 1923, ಪ್ರಥಮ ಮತ್ತು ದ್ವಿತೀಯ ಸ್ನಾತಕೋತ್ತರ ಪದವಿಯಲ್ಲಿ 390 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯಲ್ಲಿ ಒಟ್ಟಾರೆ ಶಿಕ್ಷಣ ಪಡೆಯತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳ ಸಂಖ್ಯೆ 1829 ಮತ್ತು ಹಿಂದುಳಿದ ಮತ್ತು ಇತರೆ ವರ್ಗದ ವಿದ್ಯಾರ್ಥಿಗಳ ಸಂಖ್ಯೆ 2534. ಈ ಎಲ್ಲಾ ಮಕ್ಕಳ ಶ್ರೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಸ್ಥಳೀಯ ಜನಪ್ರತಿನಿಧಿಗಳು ಕೊಡಗು ವಿವಿಯನ್ನು ಉಳಿಸಿಕೊಳ್ಳಲಿ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ, ಮತ್ತೊಬ್ಬರು ಶಾಸಕರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಆದರೆ ಯಾರೂ ವಿವಿ ಉಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲವೆಂದು ಟೀಕಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕೊಡಗು ವಿವಿಗೆ ಒಳಪಟ್ಟ ಕಾಲೇಜುಗಳ ವಿದ್ಯಾರ್ಥಿ ಸಂಘ, ಹಳೇ ವಿದ್ಯಾರ್ಥಿ ಸಂಘ ಮತ್ತು ಸಂಘ ಸಂಸ್ಥೆಗಳ ಮೂಲಕ ಕಾಲೇಜು ಹಂತದಲ್ಲಿ ಪ್ರತಿಭಟನೆಗಳನ್ನು ರೂಪಿಸಲಾಗುತ್ತದೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಜಿಲ್ಲಾ ಬಂದ್ ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕಾಂಗ್ರೆಸ್ ನ ವಿ.ಪಿ.ಶಶಿಧರ್ ನೇತೃತ್ವದ ಹಿತರಕ್ಷಣಾ ಸಮಿತಿ ಕೊಡಗು ವಿವಿ ಉಳಿಸಲು ಹೋರಾಟ ನಡೆಸುವುದಾಗಿ ಹೇಳಿ ಕಣ್ಣೊರೆಸುವ ತಂತ್ರ ಅನುಸರಿಸುವುದು ಬೇಡ. ಕಾಳಜಿ ಇದ್ದರೆ ಸರ್ಕಾರದ ಬಳಿಗೆ ತೆರಳಿ ವಿವಿ ಉಳಿಸಿಕೊಳ್ಳಲಿ. ಸ್ಥಳೀಯ ಶಾಸಕರು ಸದನದ ಬಾವಿಗಿಳಿದು ಹೋರಾಟ ನಡೆಸಲಿ ಎಂದರು. ಕೊಡಗು ವಿವಿ ಸೇರಿದಂತೆ ರಾಜ್ಯದ ನೂತನ ವಿವಿಗಳನ್ನು ಮುಚ್ಚುವ ನಿರ್ಧಾರದ ಸರ್ಕಾರದ ಸಭೆಯಲ್ಲಿದ್ದ ಜಿಲ್ಲಾ ಉಸ್ತವಾರಿ ಸಚಿವರು, ಕೊಡಗು ವಿವಿಯ ಬಗ್ಗೆ ಚಕಾರವೆತ್ತಿಲ್ಲ. ಈ ಬಗ್ಗೆ ಇನ್ನಾದರು ಗಮನ ಹರಿಸಿ ಕೊಡಗು ವಿವಿ ಮುಚ್ಚದಂತೆ ನೋಡಿಕೊಳ್ಳದಿದ್ದಲ್ಲಿ ಉಸ್ತುವಾರಿ ಸಚಿವರು ಕೊಡಗಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭ ‘ಕಪ್ಪು ಪಟ್ಟಿ’ ಪ್ರದರ್ಶಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಶಿಕ್ಷಣದ ಮೂಲಕ ರಾಷ್ಟ್ರದ ಅಭಿವೃದ್ಧಿ ಎನ್ನುವುದನ್ನು ಮನಗಾಣುವ ಮೂಲಕ ರಾಜ್ಯ ಸರ್ಕಾರ ಕೊಡಗು ವಿವಿಯನ್ನು ಮುಚ್ಚದೆ, ಅದಕ್ಕೆ 5 ಕೋಟಿ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು. ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ ಮಾತನಾಡಿ, ಕೊಡಗು ವಿವಿ ನಮ್ಮ ಹೆಮ್ಮೆಯಾಗಿದೆ. ಇದರ ಉಳಿವಿಗೆ ಪ್ರಬಲ ಹೋರಾಟ ರೂಪಿಸುವುದಾಗಿ ಹೇಳಿದರು. ಮಾಜಿ ಎಂಎಲ್‍ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಅಹಿಂದ ಮುಖ್ಯಮಂತ್ರಿಗಳೆಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು, ಕೊಡಗು ವಿವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಮತ್ತು ಹಿಂದುಳಿದ ಮಕ್ಕಳ ಬಗ್ಗೆ ಚಿಂತಿಸಲಿ, ವಿವಿ ಉಳಿಸಿ ತೋರಿಸಲಿ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.









