
ಸಿದ್ದಾಪುರ ಫೆ.21 NEWS DESK : ಕುಶಾಲನಗರ ತಾಲ್ಲೂಕಿನ ರಂಗಸಮುದ್ರ, ಗುಹ್ಯ, ದುಬಾರೆ ಮತ್ತು ಚಿಕ್ಲಿಹೊಳೆ ಜಲಾಶಯದ ರಸ್ತೆಗಳನ್ನು ರಸ್ತೆ ಬದಿ ಕಾಡುಗಳೇ ನುಂಗಿ ಬಿಡುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಈ ಎಲ್ಲಾ ರಸ್ತೆಗಳು ಹೆದ್ದಾರಿಗಳಾಗಿದ್ದು, ನಿರ್ವಹಣೆ ಇಲ್ಲದೆ ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ಅಡಚಣೆಯಾಗಿದೆ. ರಸ್ತೆಗಳ ಎರಡೂ ಬದಿಗಳಲ್ಲಿ ದಟ್ಟ ಕಾಡು ಆವರಿಸಿದೆ. ಊರಿನ ಫಲಕ ಮತ್ತು ಮಾರ್ಗಸೂಚಿಯ ಫಲಕಗಳು ಕಾಡು ಗಿಡಗಳಿಂದ ಮುಚ್ಚಿ ಹೋಗಿದೆ. ಕಾಡು ಆವರಿಸಿಕೊಂಡಿರುವುದರಿಂದ ಎದುರು ಬದಿಯಿಂದ ಬರುವ ವಾಹನಗಳು ಕೂಡ ಗೋಚರಿಸುತ್ತಿಲ್ಲ. ಈ ಭಾಗದಲ್ಲಿ ಕಾಡಾನೆಗಳ ಉಪಟಳವೂ ಹೆಚ್ಚಿದ್ದು, ಕಾಡಾನೆಗಳು ಇರುವುದು ಗೋಚರಿಸದಷ್ಟು ಕಾಡು ಬೆಳೆದು ನಿಂತಿದೆ. ಆನೆಗಳು ದಿಢೀರ್ ದಾಳಿ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಪ್ರತಿವರ್ಷ ರಸ್ತೆ ಬದಿಯ ಕಾಡುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮಾಡಬೇಕು. ಆದರೆ ಈ ಇಲಾಖೆ ರಸ್ತೆಯಲ್ಲಿ ಸಂಭವಿಸಬಹುದಾದ ಅಪಾಯವನ್ನು ಅರಿಯದೆ ಗಾಢ ನಿದ್ದೆಯಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಭಾಗದಲ್ಲಿ ದುಬಾರೆ ಮತ್ತು ಚಿಕ್ಲಿಹೊಳೆ ಜಲಾಶಯದಂತಹ ಹೆಸರುವಾಸಿ ಪ್ರವಾಸಿತಾಣಗಳಿದ್ದು, ಪ್ರವಾಸಿಗರ ವಾಹನಗಳು ಅಧಿಕ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಅಪಾಯ ಎದುರಾಗುವ ಮೊದಲು ಲೋಕೋಪಯೋಗಿ ಇಲಾಖೆ ಅಗತ್ಯ ಕ್ರಮ ಕೈಗೊಂಡು ರಸ್ತೆಗಳನ್ನು ಕಾಡು ಮುಕ್ತಗೊಳಿಸಬೇಕು ಮತ್ತು ಪ್ರತಿವರ್ಷ ನಿರ್ವಹಣೆ ಮಾಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ವರದಿ : ಅಂಚೆಮನೆ ಸುಧಿ










