

ನಾಪೋಕ್ಲು ಫೆ.22 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭಕ್ಕೆ ಚಾಲನೆ ದೊರೆಯಿತು. ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ ದರ್ಗಾಗೆ ತೆರಳಿದ ಮುಸ್ಲಿಂ ಬಾಂಧವರು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿದರು. ಫೆ.28ರ ವರೆಗೆ ಉರೂಸ್ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನದಾನ, ನಡೆಯಲಿದೆ. ಈ ಸಂದರ್ಭ ಕೊಡಗು ಜಿಲ್ಲಾ ನಾಹಿಬ್ ಖಾಝಿ ಅಬುಲ್ಲ ಫೈಝಿ ಎಡಪಾಲ, ಸಯ್ಯಿದ್ ಇಲ್ಯಾಸ್ ತಂಙಳ್, ಹಝೀಝ್ ತಂಙಳ್, ಮಾಜಿ ವಖ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಯಾಕೂಬ್, ಎಮ್ಮೆಮಾಡು ಜಮಾಯತ್ ಮಾಜಿ ಅಧ್ಯಕ್ಷ ಹುಸೈನ್ ಸಖಾಫಿ, ಹಂಸ ಮುಸ್ಲಿಯಾರ್, ಹಸೈನಾರ್ ಹಾಜಿ ಚಂಬರಂಡ ಜಮಾಯತ್ ನ ಪದಾಧಿಕಾರಿಗಳು ಸದಸ್ಯರು ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು. ಇಂದು (ಫೆ.22) ರಂದು ದಿಕ್ರ್ ಹಲ್ಖಾ ಮತ್ತು ಮತಪ್ರವಚನ ನಡೆಯಲಿದ್ದು, ಕೂರಿಕುಝಿ ತಂಙಳ್ ಸಯ್ಯಿದ್ ಝೈನುದ್ದೀನ್ ಅಲ್ ಬುಖಾರಿ ಲಕ್ಷ ದ್ವೀಪ್ ನೇತೃತ್ವ ವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಮತಪ್ರವಚನ ನಡೆಯಲಿದ್ದು, ಕಾಸರಗೋಡಿನ ಸಯ್ಯಿದ್ ಖಮರುದ್ದೀನ್ ತಂಙಳ್ ದುಆ ನೆರವೇರಿಸಲಿದ್ದಾರೆ. ಬಹು ಉಸ್ಮಾನ್ ಔಹರಿ ನೆಲ್ಯಾಡಿ “ಲಹರಿಕ್ಕ್ ಅಡಿಮಪ್ಪೆಡುನ್ನ ಯುವದ” ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಫೆ.23 ರಂದು ಮಗ್ರಿಬ್ ನಮಾಝ್ ಬಳಿಕ ಮಲಪ್ಪುರಂ ಮನ್ಹಜ್ ಚೆರ್‍ಮಾನ್ ಸಯ್ಯಿದ್ ಸಾಲಿಂ ಅಲ್ ಬುಖಾರಿ ತಂಙಳ್ ನೇತೃತ್ವದಲ್ಲಿ ಖತಂ ದುಆ ನೆರವೇರಲಿದೆ. ರಾತ್ರಿ 8 ಗಂಟೆಗೆ ಮತಪ್ರವಚನ ನಡೆಲಿದ್ದು, ಆಟೀರಿ ತಂಙಳ್ ಸಯ್ಯಿದ್ ವಿ.ಪಿ.ಅಬ್ದಲ್‍ರಹ್ಮಾನ್ “ಸ್ವಲಾತಿಲೂಡೆ ಸ್ವರ್ಗತ್ತಿಲೇಕ್” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ವರದಿ : ದುಗ್ಗಳ ಸದಾನಂದ.









