
ಮಡಿಕೇರಿ ಫೆ.22 NEWS DESK : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕೊಡಗು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕೊಡವ ವಿದ್ಯಾರ್ಥಿಗಳಿಗೆ ಮಡಿಕೇರಿಯ ಕೊಡವ ದೀನಬಂಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕಟ್ಟೇರ ಎ.ಅಯ್ಯಪ್ಪ ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನಮ್ಮ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಈ ವಿದ್ಯಾರ್ಥಿವೇತನವನ್ನು ವಿದ್ಯಾರ್ಜಗೆ ಅಗತ್ಯವಾದ ಶುಲ್ಕ ಪಾವತಿಗೆ ಅಥವಾ ಪುಸ್ತಕ ಕೊಳ್ಳಲು, ಇನ್ನಿತರ ಶೈಕ್ಷಣಿಕ ಉಪಯೋಗಕ್ಕೆ ಬಳಸಿಕೊಳ್ಳಬೇಕು, ವಿದ್ಯಾರ್ಥಿಗಳು ತಾವು ಮುಂದೆ ಜೀವನದಲ್ಲಿ ಯಾವ ಮಾರ್ಗದಲ್ಲಿ ಸಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡು, ಸಮಯ ಪಾಲನೆಯೊಂದಿಗೆ ವಿದ್ಯಾಭ್ಯಾಸ ಮುಗಿಸಿ ಜೀವನದ ಉತ್ತುಂಗವನ್ನು ಏರಬೇಕು ಎಂದು ಸಲಹೆ ನೀಡಿದರು. ನಾವು ನಮ್ಮ ಹೆತ್ತವರಿಗೆ, ವಿದ್ಯೆ ಕೊಟ್ಟ ಗುರುಗಳಿಗೆ, ಸರಿಯಾದ ಮಾರ್ಗ ತೋರಿದ ಹಿರಿಯರನ್ನು ಗೌರವದಿಂದ ಕಾಣಬೇಕು ಮತ್ತು ಜೀವನದ ಮೌಲ್ಯವನ್ನು ಜಾಗೃತ ಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಡಾ. ಎ.ಪಿ.ಜೆಅಬ್ದುಲ್ ಕಲಾಂ ಅವರ ಜೀವನದ ಆದರ್ಶವನ್ನು ತಿಳಿಸಿದರು. ಟ್ರಸ್ಟ್ ನ ಗೌರವ ಕಾರ್ಯದರ್ಶಿ ಪಟ್ಟಡ ಎ.ಜಯಕುಮಾರ್ ಮಾತನಾಡಿ, 1996ರಲ್ಲಿ ದೀನಬಂಧು ಚಾರಿಟೇಬಲ್ ಟ್ರಸ್ಟ್ ಪ್ರಾರಂಭಗೊಂಡಿದ್ದು, ನಂತರದಲ್ಲಿ ಕೊಡವ ದೀನಬಂಧು ಚಾರಿಟೇಬಲ್ ಟ್ರಸ್ಟ್ ಎಂದು ಮರು ನಾಮಕರಣ ಮಾಡಲಾಯಿತು. ಇಲ್ಲಿಯವರೆಗೂ ಸುಮಾರು 3,012 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ನೆರವಾಗಿದ್ದು, ನಮ್ಮೊಂದಿಗೆ ಹಲವಾರು ಸಹೃದಯ ದಾನಿಗಳು ಕೂಡ ಕೈಜೋಡಿಸಿ ಸಹಕರಿಸುತ್ತಿದ್ದಾರೆ. ಅಲ್ಲದೆ ಸೇನೆಗೆ ಸೇರಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ತಮ್ಮದೆ ಮತ್ತೊಂದು ಟ್ರಸ್ಟ್ ವತಿಯಿಂದ ತರಬೇತಿಯನ್ನು ಕೂಡ ನೀಡುವುದಾಗಿ ತಿಳಿಸಿದರು. ಟ್ರಸ್ಟ್ ನ ಖಜಾಂಚಿ, ನಿವೃತ್ತ ವಿಂಗ್ ಕಮಾಂಡರ್ ಚೇಂದ್ರಿಮಾಡ ಜಿ.ಮಾದಪ್ಪ ಮಾತನಾಡಿ, ಇಂದಿನ ಪೀಳಿಗೆ ಆಹಾರ ಬೆಲೆ ತಿಳಿಯುವಂತಾಗಿದೆ. ಕಣ್ಣಿಗೆ ಕಂಡದ್ದೇಲ್ಲ ಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲವನ್ನು ತೆಗೆದುಕೊಂಡು ವ್ಯರ್ಥಮಾಡುವುದರೊಂದಿಗೆ, ಅಗತ್ಯವಿರುವವರಿಗೆ ಆಹಾರ ಸಿಗದಂತೆ ಮಾಡುತ್ತಿದ್ದೇವೆ. ಆದ್ದರಿಂದ ಆಹಾರವನ್ನು ವ್ಯರ್ಥಮಾಡದೆ ಇತರರಿಗೂ ಊಟ ದೊರಕುವಂತೆ ಮಾಡಬೇಕು ಎಂದರು. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ ಹೆಚ್ಚಾಗಿದ್ದು, ನಾವು ಮಾದಕ ದ್ರವ್ಯಗಳಿಂದ ದೂರವಿರುವುದರೊಂದಿಗೆ ಇತರರು ಮಾದಕ ವ್ಯಸನಿಗಳಲಾಗುವುದನ್ನು ತಡೆಯೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ಬಿ.ರಾಘವ, ಕೊಡವ ದೀನಬಂಧು ಟ್ರಸ್ಟ್ ಮೈಸೂರು-ಕೊಡಗಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಅವರ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸಾಧಿಸಿ ಇನ್ನಿತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕಿವಿ ಮಾತು ಹೇಳಿದರು. ದೀನ ಬಂಧು ಟ್ರಸ್ಟಿಯ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸದಸ್ಯರು ತಮ್ಮ ಇಳಿ ವಯಸ್ಸಿನಲ್ಲಿಯು ಕೊಡಗಿನ ಪ್ರತಿಯೊಂದು ಕಾಲೇಜುಗಳಿಗೆ ಸ್ವತಃ ಭೇಟಿ ನೀಡಿ ವಿದ್ಯಾರ್ಥಿ ವೇತನವನ್ನು ವಿತರಿಸುವುದರಲ್ಲಿ ಕಾರ್ಯಪ್ರವೃತ್ತರಗಿದ್ದು, ತಮ್ಮ ಸಮಾಜ ಸೇವೆಯ ಮೂಲಕ ಇನ್ನಿತರಿಗೆ ಮಾದರಿ ಹಾಗೂ ಸ್ಫೂರ್ತಿಯಾಗಿದ್ದಾರೆ ಎಂದರು. ಟ್ರಸ್ಟಿಗಳಾದ ಕಳ್ಳಿಚಂಡ ಮುದ್ದುರಾಜ್, ಚಂಬಂಡ ಜಿ.ಸೋಮಣ್ಣ ಅವರು ಹಾಜರಿದ್ದು ವಿದ್ಯಾರ್ಥಿಗಿಗೆ ಹಿತ ವಚನ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.









