
ಕುಶಾಲನಗರ NEWS DESK ಫೆ.23 : ಜಿಲ್ಲೆಯ ಕುಶಾಲನಗರ ಸಮೀಪ ಅಳುವಾರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ಇತರೆ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಕುಶಾಲನಗರ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಸಮಾಜದ ಅಧ್ಯಕ್ಷರಾದ ವಾಂಚೀರ ಮನು ನಂಜುಂಡ ತಿಳಿಸಿದ್ದಾರೆ. ಕುಶಾಲನಗರ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಕೊಡಗು ವಿಶ್ವವಿದ್ಯಾಲಯದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ಜಿಲ್ಲೆಯ ಹಲವೆಡೆ ನೆಲೆಸಿರುವ ಬಡತನ ರೇಖೆಯ ಹಾಗೂ ಮಧ್ಯಮ ವರ್ಗದ ಹಿಂದುಳಿದ ಜನರಿಗೆ ಉನ್ನತ ಶಿಕ್ಷಣವನ್ನು ಜಿಲ್ಲೆಯಲ್ಲೇ ನೀಡುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ ವಿವಿಯನ್ನು ಕಲ್ಪಿಸಿದೆ.
ಈ ಮೂಲಕ ನೂರಾರು ಸಂಖ್ಯೆಯ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಅನುಕೂಲ ಕಲ್ಪಿಸುವುದರೊಂದಿಗೆ ವಿದ್ಯಾರ್ಥಿಗಳ ಹಾಗೂ ಪೋಷಕರ ಕನಸು ನನಸಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಇದನ್ನು ರದ್ದುಗೊಳಿಸಿ ಬೇರೆ ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ಚಿಂತನೆ ಮಾಡಿರುವುದು ವಿಪರ್ಯಾಸ. ಸರ್ಕಾರದ ನಿರ್ಧಾರದ ವಿರುದ್ಧ ಕುಶಾಲನಗರ ಕೊಡವ ಸಮಾಜ ಸೇರಿದಂತೆ ಜಿಲ್ಲೆಯ ಸಮಾಜಗಳ ಜೊತೆ ಕೈಜೋಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ಪ್ರಸಕ್ತ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಶಿಕ್ಷಣ ಇಲಾಖೆಗೆ ಕುತ್ತು ತರುವುದು ಸರಿಯಲ್ಲ. ಕೊಡಗು ವಿಶ್ವವಿದ್ಯಾಲಯವನ್ನು ಜಿಲ್ಲೆಯ ಅಳುವಾರದಲ್ಲಿ ಉಳಿಸಿಕೊಂಡು ಅಭಿವೃದ್ಧಿಗೊಳಿಸುವ ಕೆಲಸ ಆಗಬೇಕು. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು 10ನೇ ತರಗತಿ ಮತ್ತು ಪಿಯುಸಿ ತರಗತಿಗಳಲ್ಲಿ ಉತ್ತಮ ಅಂಕ ಪಡೆದು ರಾಜ್ಯಕ್ಕೆ ಎರಡು ಅಥವಾ ಮೂರನೇ ಸ್ಥಾನ ಪಡೆಯುತ್ತಿದ್ದಾರೆ. ಪದವಿ ವ್ಯಾಸಂಗ ನಂತರ ಉನ್ನತ ವ್ಯಾಸಂಗಕ್ಕೆ ಜಿಲ್ಲೆಯಲ್ಲಿ ಇರುವ ವಿಶ್ವವಿದ್ಯಾಲಯ ತುಂಬಾ ಅನುಕೂಲ ತಂದಿದೆ. ಸರಕಾರ ವಿಶ್ವವಿದ್ಯಾಲಯವನ್ನು ರದ್ದುಗೊಳಿಸುವ ನಿರ್ಧಾರ ಕೈ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ಹರಿಸಬೇಕು. ಈ ಸಂಬಂಧ ವಿಶ್ವವಿದ್ಯಾಲಯ ಹಿತ ರಕ್ಷಣಾ ಬಳಗ ಕೈಗೊಳ್ಳುವ ಎಲ್ಲಾ ಹೋರಾಟಕ್ಕೂ ಸಮಾಜ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಎಂದು ವಾಂಚೀರ ಮನು ನಂಜುಂಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಕೊಡವ ಸಮಾಜದ ಉಪಾಧ್ಯಕ್ಷ ಪುಲಿಯಂಡ ಎಂ.ಚೆಂಗಪ್ಪ, ಕಾರ್ಯದರ್ಶಿ ಆಯಿಲಪಂಡ ಸಂಜು ಬೆಳ್ಳಿಯಪ್ಪ, ಜಂಟಿ ಕಾರ್ಯದರ್ಶಿ ಮೈಂದಪಂಡ ಜಗದೀಶ್, ನಿರ್ದೇಶಕರಾದ ಅಂಜಪರವಂಡ ತಮ್ಮಯ್ಯ ಹಾಗೂ ಸಿದ್ದಂಡ ಮಹೇಶ ಉಪಸ್ಥಿತರಿದ್ದರು.








