
ವಿರಾಜಪೇಟೆ NEWS DESK ಫೆ.23 : ವಿರಾಜಪೇಟೆ ಕಾವೇರಿ ಕಾಲೇಜಿನ ವತಿಯಿಂದ ಬಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಶಿಬಿರಾರ್ಥಿಗಳು ಬಿ ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಗ್ರಾಮ ಸ್ವಚ್ಛತಾ ಅಭಿಯಾನ ನಡೆಸಿದರು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಪರಮೇಶ್ ಯುವ ಜನತೆ ದೇಶದ ಶಕ್ತಿ, ಯುವಜನರು ಬದಲಾದರೆ ಸಮಾಜವು ಬದಲಾಗುತ್ತದೆ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನು ಅರಿತು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು. ಹಾಗೆ ಒಣಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಸ್ವಚ್ಛತಾ ಕಾರ್ಮಿಗರಿಗೂ ಸಹಾಯವಾಗುವಂತೆ ನಡೆದುಕೊಳ್ಳಬೇಕು. ಹಸಿ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಪುನರ್ ಬಳಕೆ ಮಾಡುವ ಕೆಲಸ ನಡೆದಾಗ ತ್ಯಾಜ್ಯದ ಪ್ರಮಾಣವೂ ಕಡಿಮೆಯಾಗಿ ನೈರ್ಮಲ್ಯತೆ ಹಾಗೂ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದರು. ಶಾಲೆಯ ಮುಖ್ಯ ಶಿಕ್ಷಕರಾದ ಸುಜಾತ ಮಾತನಾಡಿ ನಾವು ದೈಹಿಕ ಸ್ವಚ್ಛತೆಗೆ ಒತ್ತು ನೀಡುವಂತೆ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೂ ಪ್ರಾಮುಖ್ಯತೆ ನೀಡಬೇಕು. ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿದ್ದರೆ ನಮ್ಮ ಆರೋಗ್ಯ ಸಹ ಉತ್ತಮವಾಗಿರುತ್ತದೆ. ಪ್ರತಿ ಊರಿನಲ್ಲೂ ಸಂಘ ಸಂಸ್ಥೆಗಳು ಸ್ವಯಂಸೇವಕರು ಇಂತಹ ಅಭಿಯಾನಗಳನ್ನು ನಡೆಸಿದರೆ ಗ್ರಾಮಗಳು ಸ್ವಚ್ಛವಾಗುತ್ತದೆ ಎಂದರು. ನಂತರ ಕಾವೇರಿ ಕಾಲೇಜಿನ ಸ್ವಯಂ ಸೇವಕರು ಬಿ.ಶೆಟ್ಟಿಗೇರಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಪೇಪರ್ ಬಾಟಲಿಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಪಂಚಾಯಿತಿಯ ಕಸ ಸಂಗ್ರಹಣ ವಾಹನಕ್ಕೆ ನೀಡಿದರು. ಸ್ವಚ್ಛತಾ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಹಾಜರಿದ್ದು, ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು.









