
ಮಡಿಕೇರಿ ಫೆ.24 NEWS DESK : ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ನಾಗದೇವರ ನೂತನ ಆಲಯ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರ ತಂತ್ರಿಗಳಾದ ಕೆ.ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ಫೆ.22 ರಂದು ಸಂಜೆ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾ ಸಂಕಲ್ಪ, ಮಾತೃಕಾ ಪೂಜೆ, ಋತ್ವಿಗ್ವರಣೆ, ಪ್ರಸಾದ ಪ್ರತಿಗ್ರಹ, ಸ್ಥಾನ ಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತು ಬಲಿ, ಆಶ್ಲೇಷ ಬಲಿ, ಮಹಾಮಂಗಳಾರತಿ ನೆರವೇರಿತು.
ಫೆ.23 ರಂದು ಮುಂಜಾನೆಯಿಂದಲೇ ಗುರುಗಣಪತಿ ಪೂಜೆ, ಗಣಪತಿ ಹೋಮ, ನಾಗದೇವರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಶಾಂತಿಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ಜರುಗಿತು. ನಂತರ ಉಡುಪಿಯ ವೇ.ಬ್ರ.ಶ್ರೀ ಎ.ಸುಬ್ರಮಣ್ಯ ಮಧ್ಯಸ್ಥ ಅವರಿಂದ ನಾಗಪಾತ್ರಿ ನಾಗದರ್ಶನ ಸೇವೆ ನಡೆಯಿತು. ಸಂಜೆ ಆಶೀರ್ವಾದ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು. ದೇವಾಲಯದ ಮ್ಯಾನೇಜಿಂಗ್ ಟ್ರಸ್ಟ್ ನ ಟ್ರಸ್ಟಿಗಳು ಹಾಗೂನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









