
ಮಡಿಕೇರಿ ಫೆ.24 NEWS DESK : ವಿರಾಜಪೇಟೆ ತಾಲ್ಲೂಕು ಮೈದಾನದಲ್ಲಿ ಸಿಸಿಬಿ ವತಿಯಿಂದ ಆಯೋಜಿಸಿದ ಫುಟ್ಬಾಲ್ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭಾಗವಹಿಸಿ ಫುಟ್ಬಾಲ್ ಆಟಗಾರರನ್ನು ಅಭಿನಂದಿಸಿ ಶುಭ ಕೋರಿದರು. ಚೆಂಡನ್ನು ಒದೆಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿದ ಶಾಸಕರು, ಕ್ರೀಡೆಯು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಿ, ಗೆದ್ದವರನ್ನು ಅಭಿನಂದಿಸುತ್ತಾ ಹಾಗು ಸೋತವರನ್ನು ಮರು ಪ್ರಯತ್ನಕ್ಕಾಗಿ ಹುರಿದುಂಬಿಸುವುದೇ ನಿಜವಾದ ಕ್ರೀಡಾ ಸ್ಪೂರ್ತಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ವೈಯುಕ್ತಿಕ ಬೆಳವಣಿಗೆ ಹಾಗೂ ಬಲವರ್ಧನೆಗೆ ಸಹಕಾರಿಯಾಗಿದ್ದು, ಅನೇಕ ರೀತಿಯಲ್ಲಿ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಿರುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವುದಕ್ಕೂ ಮಿಗಿಲಾಗಿ ಕ್ರೀಡಾ ಮನೋಭಾವದಿಂದ ಆಟವನ್ನು ಆಸ್ವಾದಿಸಿ ಜಯಗಳಿಸುವುದು ನಮ್ಮೆಲ್ಲರ ಪ್ರಮುಖ ಗುರಿಯಾಗಿರಬೇಕು ಎಂದು ಪುನರುಚ್ಚರಿಸಿದರು. ಈ ಪಂದ್ಯಾಟವು, ನಾಡಿನ ಹಲವು ಫುಟ್ಬಾಲ್ ಪ್ರತಿಭೆಗಳು ಅನಾವರಣಗೊಳ್ಳಲು ಸಹಕಾರಿಯಾಗಿ ಕ್ರೀಡಾಂಗದಲ್ಲಿ ಉತ್ತಮ ಹೆಸರು ಗಳಿಸಲು ನಾಂದಿಯಾಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು,ಪುರಸಭೆ ಸದಸ್ಯರು,ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









