
ಮಡಿಕೇರಿ ಫೆ.24 : ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ಹತ್ಯಾಕಾಂಡ ನಡೆದ ವಿವಿಧ ದುರಂತ ಸ್ಥಳಗಳಲ್ಲಿ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಾತನಾಡಿ ರಾಜಸೀಟ್ ನಲ್ಲಿ ಸಾವಿರಾರು ಕೊಡವರನ್ನು ಬರ್ಬರವಾಗಿ ಹತ್ಯೆಗೈದು ತಾಳತ್ತ್ಮನೆ ಕಡಿದಾದ ಕಂದಕಕ್ಕೆ ಕೆಳದಿ ರಾಜರು ತಳ್ಳಿದರು. ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಪಿತೂರಿಯಲ್ಲಿ ಕೊಡವ ನಾಯಕರ ದಾರುಣ ಹತ್ಯೆಗಳು ನಡೆದವು. ದೇವಟ್‌ಪರಂಬ್ ನಲ್ಲಿ ಟಿಪ್ಪು ಸುಲ್ತಾನ್ ನ ಪಡೆಗಳು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಳದೊಂದಿಗೆ ಸೇರಿಸಿಕೊಂಡು ಸಾವಿರಾರು ಕೊಡವರನ್ನು ಕಗ್ಗೊಲೆ ನಡೆಸಿದವು. ಈ ಸಂತ್ರಸ್ತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಿಎನ್‌ಸಿ ಪ್ರಾರ್ಥಿಸಿದೆ ಮತ್ತು ಗುರಿಗಳ ಸಾಧನೆಗೆ ದಿವ್ಯ ಆತ್ಮಗಳಿಂದ ಆಶೀರ್ವಾದವನ್ನು ಕೋರಲಾಗಿದೆ ಎಂದರು. ಡಾ.ಐ.ಎಂ.ಮುತ್ತಣ್ಣ ವಿರಚಿತ “ಟಿಪ್ಪು ಎಕ್ಸ್ ರೇಡ್”, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ “ಚಿಕ್ಕವೀರರಾಜೇಂದ್ರ.”, ಡಾ.ವಿಕ್ರಮ್ ಸಂಪತ್ ವಿರಚಿತ “ಟಿಪ್ಪು ಸುಲ್ತಾನ್ ದಿ ಸಾಗಾ ಆಫ್ ಮೈಸೂರ್ ಇಂರ‍್ರೆಗ್ನಮ್” ಎಂಬ ಕೃತಿಗಳಲ್ಲಿ ಕೊಡವರ ದುರಂತ ಅಧ್ಯಾಯಗಳನ್ನು ದಾಖಲಿಸಲಾಗಿದೆ. ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಕೊಡವರ ಈ ದುರಂತಗಳನ್ನು ಸೇರಿಸಬೇಕು. ನಾಲ್ಕು ದುರಂತ ಸ್ಥಳಗಳಲ್ಲಿ ವಿಶ್ವ ದರ್ಜೆಯ ಅಂತರರಾಷ್ಟ್ರೀಯ ನರಮೇಧದ ಸ್ಮಾರಕಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಕೊಡವ ಭಾಷೆಯನ್ನು ಸಂವಿಧಾನದ 8 ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕು, ವಿಶ್ವರಾಷ್ಟ್ರ ಸಂಸ್ಥೆ (ಯುಎನ್) ಯ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಮಾನ್ಯತೆ ನೀಡಬೇಕು, ಹೆಚ್ಚುವರಿಯಾಗಿ ಕೊಡವ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಗುರುತಿಸಬೇಕು. ಕೊಡವಲ್ಯಾಂಡ್ ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸ್ವ-ಆಡಳಿತ ಮತ್ತು ಸ್ವ-ನಿರ್ಣಯದ ಹಕ್ಕುಗಳು, ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕೊಡವರಿಗೆ ಯುಎನ್ ಆದಿಮ ಸಂಜಾತ ಜನಾಂಗದ ಹಕ್ಕುಗಳು ಲಭ್ಯವಾಗಬೇಕು. ಕೊಡವರನ್ನು ಪರಿಶಿಷ್ಟ ಪಂಗಡ (ಎಸ್ಟಿ) ವರ್ಗೀಕರಣ ಪಟ್ಟಿಗೆ ಸೇರಿಸಬೇಕು. ಪ್ರತ್ಯೇಕವಾದ, ವಿಶಿಷ್ಟವಾದ ಮತ್ತು ಸೂಕ್ಷ್ಮ ದರ್ಶಕೀಯ ಆದಿಮಸಂಜಾತ ಮೂಲವಂಶಸ್ಥ (ರೇಸ್) ಜನಾಂಗವೆಂದು ಗುರುತಿಸಬೇಕು. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಕೊಡವ ಜನಾಂಗಕ್ಕೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದರು.
ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ನಂದಿನೆರವಂಡ ರೇಖಾ ನಾಚಪ್ಪ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಮುದ್ದಿಯಡ ಲೀಲಾವತಿ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಪಟ್ಟಮಾಡ ಕುಶ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಜಮ್ಮಡ ಮೋಹನ್, ಮಣವಟ್ಟಿರ ಚಿಣ್ಣಪ್ಪ, ಅರೆಯಡ ಗಿರೀಶ್, ಅಪ್ಪೆಂಗಡ ಮಾಲೆ ಪೂಣಚ್ಚ, ಅಜ್ಜಿಕಂಡ ಸನ್ನಿ ಮಾಚಯ್ಯ, ಮೂಕೊಂಡ ದಿಲೀಪ್, ಅಪ್ಪಾರಂಡ ಪ್ರಕಾಶ್, ಚೀಯಬೇರ ಸತೀಶ್, ಚೊಳಪಂಡ ನಾಣಯ್ಯ, ಅಪ್ಪಾರಂಡ ಆರ್ಯ ಚೆಂಗಪ್ಪ ಹಾಗೂ ಕೆ.ಪೊನ್ನು ಪುಷ್ಪ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಅರ್ಪಿಸಿದರು.










