
ಮಡಿಕೇರಿ ಫೆ.25 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೊದಲಿಗೆ ದೀಪ ಬೆಳಗಿಸುವುದರೊಂದಿಗೆ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು. ಭಗವದ್ಗೀತೆ, ಬೈಬಲ್, ಕುರಾನ್ ಪಠಣ ಮಾಡಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಮ್ಮಿ ಸ್ವಿಕೇರಾ ದಿನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್ನ ಮಾತನಾಡಿ ಸ್ಕೌಟ್ ಮತ್ತು ಗೈಡ್ ಸಂಸ್ಥೆಯು ಮಕ್ಕಳಲ್ಲಿ ಮನಸ್ಥೈರ್ಯ ಮತ್ತು ಸೇವಾ ಮನೋಭಾವ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ ಶತಮಾನಗಳ ಹಿಂದೆಯೇ ಬೇಡನ್ ಪೂವೆಲ್ ಅವರು ಮಕ್ಕಳ ಹಿತದೃಷ್ಟಿ ಇಟ್ಟುಕೊಂಡು ಇಂತಹ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದ್ದು ಈ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರೆ ತಪ್ಪಾಗಲಾರದು. ಯಾರೇ ಆದರೂ ಒಳ್ಳೆಯ ಕೆಲಸ ಸಮಾಜದ ಒಳಿತಿಗಾಗಿ ಮಾಡಿದರೆ ಅದು ಶಾಶ್ವತವಾಗಿ ನೆನಪಲ್ಲಿ ಉಳಿಯುತ್ತದೆ. ಅಂತವರ ದಿನಾಚರಣೆ ನಾವು ಆಚರಿಸಿರುವುದು ಬಹಳ ಹೆಮ್ಮೆ ಅನಿಸುತ್ತದೆ ಎಂದು ನುಡಿದರು. ಗೈಡ್ ಆಯುಕ್ತರಾದ ರಾಣಿ ಮಾಚಯ್ಯ, ಗೈಡ್ ವಿಭಾಗದ ಸಹ ಕಾರ್ಯದರ್ಶಿ ಹರೀಣಿ ವಿಜಯ್, ಕುಶಾಲನಗರ ಸ್ಥಳೀಯ ಸಂಸ್ಥೆಯ ಸದಸ್ಯರಾದ ಗಣೇಶ್, ಜ್ಞಾನಜ್ಯೋತಿ ಶಾಲೆಯ ಗೈಡ್ ಕ್ಯಾಪ್ಟನ್ ಸ್ವರ್ಣಲತಾ, ಲೇಡಿ ಸ್ಕೌಟ್ ಮಾಸ್ಟರ್ ಸರಳ, ಸಂತ ಜೋಸೆಫರ ಶಾಲೆಯ ಗೈಡ್ ಕ್ಯಾಪ್ಟನ್ ರಕ್ಷಿತ, ಕಚೇರಿ ಸಹಾಯಕಿ ಗಾಯನ, ಅಲ್ಲದೆ ಎಲ್ಲಾ ಶಾಲೆಗಳಿಂದ ಆಗಮಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಜರಿದ್ದರು. ಜಿಲ್ಲಾ ಸಹ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ ಸ್ವಾಗತಿಸಿದರು. ಜಿಲ್ಲಾ ಸಂಘಟಕಿ ದಮಯಂತಿ ವಂದಿಸಿದರು. ಇದೇ ದಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ ಗೈಡ್ ಕ್ಯಾಪ್ಟನ್ ಸುಲೋಚನ ಮತ್ತು ಪ್ಲಾಕ್ ಲೀಡರ್ ಡೈಸಿ ಅವರನ್ನು ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯ ಗೌರವಿಸಿದರು.










