
ನಾಪೋಕ್ಲು ಫೆ.25 NEWS DESK : ಚೆರಿಯಪರಂಬು, ಕಲ್ಲುಮೊಟ್ಟೆ ವ್ಯಾಪ್ತಿಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಚೆರಿಯಪರಂಬುವಿನಲ್ಲಿ 5ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ, 1.86 ಕೋಟಿ ವೆಚ್ಚದ ಚೆರಿಯಪರಂಬು – ಕಲ್ಲು ಮೊಟ್ಟೆ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಚೆರಿಯಪರಂಬು ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಜನರು ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದು, ರಸ್ತೆ ಮುಳುಗಡೆಯಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಮಳೆಗಾಲಕ್ಕಿಂತ ಮೊದಲು ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ರಸ್ತೆ ಕಾಮಗಾರಿಗಾಗಿ ಅಲ್ಪಸಂಖ್ಯಾತ ಇಲಾಖೆಯಿಂದ ವಿಶೇಷ ಅನುದಾನವನ್ನು ಪಡೆದುಕೊಳ್ಳಲಾಗಿದೆ ಎಂದರು. ಈ ಭಾಗದಲ್ಲಿ ಅಲ್ಪಸಂಖ್ಯಾತರೆ ಹೆಚ್ಚಿರುವುದರಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಅಲ್ಪಸಂಖ್ಯಾತರ ಇಲಾಖೆಯ ಮಂತ್ರಿಗಳಾದ ಜಮೀರ್ ಅಹ್ಮದ್ ಅವರಿಗೆ ಸಲ್ಲಿಸಿ ಭೇಟಿ ಮಾಡಿದ ಕೂಡಲೇ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಇದಕ್ಕಾಗಿ ಅವರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆಶಿ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭ ಗ್ರಾ.ಪಂ ಸದಸ್ಯ ಕುಲ್ಲೆಟಿರ ಅರುಣ್ ಬೇಬಾ, ಶಾಸಕರ ನುಡಿದಂತೆ ನಡೆದುಕೊಂಡು ಇಂದು ಒಂದು ಕೋಟಿ 86 ಲಕ್ಷ ರೂ. ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತಿರುವುದು ನಮಗೆಲ್ಲ ಸ್ಪೂರ್ತಿದಾಯಕವಾಗಿದೆ. ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು. ನಾಪೋಕ್ಲು ಕಾಂಗ್ರೆಸ್ ವಲಯ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ ಮಾತನಾಡಿ, ಶಾಸಕರೊಂದಿಗೆ ಕೊಡಗು ಉಸ್ತುವಾರಿ ಸಚಿವರು ಆಗಮಿಸಿದ ಸಂದರ್ಭ ಆಶ್ವಾಸನೆಯನ್ನು ಕೊಟ್ಟಂತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗ್ಯಾರಂಟಿ ಅನುಷ್ಠಾನ ಅಧಿಕಾರಿ ಸಮಿತಿ ಉಪಾಧ್ಯಕ್ಷ ಎಸ್.ಆರ್.ಮೆಹರೋಝ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ರಾಜೀವ್ ಗಾಂಧಿ ಸಂಘಟನಾ ಜಿಲ್ಲಾ ಅಧ್ಯಕ್ಷ ತೆನ್ನಿರಾ ಮೈನಾ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷ ಕಂಗಂಡ ಶಶಿ ಮಂದಣ್ಣ, ಡಿಸಿಸಿ ಉಪಾಧ್ಯಕ್ಷ ಎಂ.ಹೆಚ್.ಅಬ್ದುಲ್ ರೆಹಮಾನ್, ಪಂಚಾಯಿತಿ ಸದಸ್ಯ ಕುಲ್ಲೆಟಿರ ಹೇಮಾ ಅರುಣ್, ಮಹಮ್ಮದ್, ಖುರೇಶಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬೊಲ್ಲಂಡ ಸರಿ, ಸಿರಾಜ್, ಸಂಪನ್ ಅಯ್ಯಪ್ಪ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಮಕ್ಕಿ ದಿವಾಕರ ಭಟ್ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.
ವರದಿ : ದುಗ್ಗಳ ಸದಾನಂದ.









