
ವಿರಾಜಪೇಟೆ ಫೆ.25 NEWS DESK : ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದ ಸಾಹಿತ್ಯವಾಗಿದ್ದು ಎಲ್ಲರೂ ಸಾಹಿತಿಗಳಾಗಿದಿದ್ದರೂ ನಮ್ಮ ಕನ್ನಡದ ಕವಿಗಳು ಬರೆದಿರುವ ಕತೆ, ಕವನ, ಕಾದಂಬರಿಗಳನ್ನಾದರೂ ಓದುವಂತೆ ಗೋಣಿಕೊಪ್ಪ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ವಿಜಯಲಕ್ಷ್ಮಿ ಮಂಜುನಾಥ್ ಕರೆ ನೀಡಿದರು. ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಿ.ಜಿ.ರಘುನಾಥ್ ನಾಯ್ಕ್ ಹಾಗೂ ಬಿ.ಆರ್ ಸಾಯಿನಾಥ್ ದತ್ತಿನಿಧಿ ಕಾರ್ಯಕ್ರಮ ನಡೆಯಿತು. ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು, ಮಾತನಾಡಿದರು. ಹಳೆಗನ್ನಡ , ನಡುಗನ್ನಡ, ಆಧುನಿಕ ಕನ್ನಡದ ಮಹಾನ್ ಕವಿಗಳ ಕಾವ್ಯಗಳ ವಿಚಾರಧಾರೆಯ ಮಾತನಾಡಿ, ಕನ್ನಡದ ಕವಿಗಳು ರಾಜಾಶ್ರಯವಿದ್ದಾಗ ಯಾವ ರೀತಿಯ ಸಾಹಿತ್ಯ ಬರೆದರು, ಸಾಮಾಜಿಕವಾಗಿ ಜನಸಾಮಾನ್ಯರ ಜೊತೆ ಬೆರೆತಮೇಲೆ ಯಾವ ಬಗೆಯ ಸಾಹಿತ್ಯ ಹೊರಹೊಮ್ಮಿತು. ಜಗತ್ತು ಆಧುನಿಕತೆಗೆ ತೆರೆದುಕೊಂಡಾಗ ಬಿ.ಎಂಶ್ರೀ ಅಂಥವರು ಟಿ.ಪಿ ಕೈಲಾಸಂ ಹೇಗೆ ಸಾಹಿತ್ಯ ರಚನೆ ಮಾಡಿದರು ಎಂದು ವಿವರಿಸಿದರು. ಅಲ್ಲದೇ ಹೊಸಬಗೆಯ ಸಾಹಿತ್ಯ ಪ್ರಕಾರಗಳು ಎಷ್ಟು ವಿಭಿನ್ನ ನೆಲೆಗಟ್ಟಿನಲ್ಲಿ ಓದುಗರ ಮನಗೆ್ದ್ದವು ಎಂಬುದನ್ನು ಮನಮುಟ್ಟುವಂತೆ ತಿಳಿಯಪಡಿಸಿದರು. ಚಿಕ್ಕಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೀಣಾ ರಾಮಚಂದ್ರ ತಮ್ಮ ದತ್ತಿ ಉಪನ್ಯಾಸ ದಲ್ಲಿ ಇದುವರೆಗೂ ವಿರಾಜಪೇಟೆ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರ ಸೇವೆಯ ಕುರಿತಾಗಿ ಉಪನ್ಯಾಸ ನೀಡುತ್ತಾ, ದಿವಂಗತ ಡಿ.ಜೆ ಪದ್ಮನಾಭ, ಬಿ.ಜಿ ರಘುನಾಥ್ ನಾಯ್ಕ್, ಮುಲ್ಲೇಂಗಡ ಮಧೋಷ್ ಪೂವಯ್ಯ, ರಾಜೇಶ್ ಪದ್ಮನಾಭ ಅವರು ತಮ್ಮ ಸೇವಾವಧಿಯಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಕೈಗೊಂಡ ಕನ್ನಡ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಕೋವಿಡ್ ಸಂದರ್ಭದಲ್ಲಿ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ನೇಮಕವಾಗಿದ್ದೆ ಆ ಸಮಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಬೇಕಾಗಿರುತ್ತೆ. ಆ ಸಮಯದಲ್ಲಿ ಮೋರಾರ್ಜಿ ವಸತಿ ಶಾಲೆಯ ವತಿಯಿಂದ ಅಭೂತಪೂರ್ವ ಸಹಕಾರ ದೊರಕಿ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದಿತ್ತು ಎಂದರು. ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ ಕಲಿಯಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗಿ ದತ್ತಿನಿಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಸಾವಿತ್ರಿ ಹೆಚ್ .ಜಿ ಅವರು ದತ್ತಿನಿಧಿ ಉಪನ್ಯಾಸದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಜಿ ಗ್ರಾಮಪಂಚಾಯಿತಿ ಅಧ್ಯಕ್ಷೆ ರಜಿಯಾ ಫಾತೀಮಾ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೆ.ಡಿ.ಪಿ ಸದಸ್ಯ ಶಶಿಧರ್, ಆರ್ಜಿ ಗ್ರಾ.ಪಂ ಮಾಜಿ ಸದಸ್ಯ ಉಪೇಂದ್ರ ಕೆ.ಎನ್, ಗ್ರಾ.ಪಂ ಸದಸ್ಯರಾದ ಜೋಸೆಫ್, ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಎನ್, ನಿವೃತ್ತ ಶಿಕ್ಷಕ ಮಂಜುನಾಥ್ ಹೆಚ್.ಎನ್ ಉಪಸ್ಥಿತರಿದ್ದರು. ಹತ್ತನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ನಟರಾಜ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಹಾಜರಿದ್ದರು.









