
ಮಡಿಕೇರಿ NEWS DESK ಫೆ.25 : ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಅಕ್ಕಿ ಸಾಗಿಸುತಿದ್ದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಕೊಡಗು-ಕೇರಳ ಗಡಿಯ ವಾಟೆಕೊಲ್ಲಿ ಎಂಬಲ್ಲಿ ನಡೆದಿದೆ. ಸೋಮವಾರ ನಡುರಾತ್ರಿ ಆಂಧ್ರಪ್ರದೇಶ ನೋಂದಣಿ ಹೊಂದಿದ್ದ ಲಾರಿಯಲ್ಲಿ ಅಕ್ಕಿಯನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಲಾರಿ ಕೊಡಗು ಗಡಿ ಭಾಗದ ವಾಟೆಕೊಲ್ಲಿ ಎಂಬಲ್ಲಿ ಆಗಮಿಸಿದ ಸಂದರ್ಭ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಲಾರಿಯನ್ನು ರಸ್ತೆ ಬದಿಗೆ ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಸಂಪೂರ್ಣವಾಗಿ ಲಾರಿಯನ್ನು ವ್ಯಾಪಿಸಿ ಅಕ್ಕಿ ಸಹಿತ ಲಾರಿ ಬೆಂಕಗೆ ಆಹುತಿಯಾಗಿದೆ. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ವಿರಾಜಪೇಟೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸಲು ಹರ ಸಾಹಸ ಪಡಬೇಕಾಯಿತು. ಬೆಂಕಿ ಅನಾಹುತದಿಂದ ನೂರಾರು ಚೀಲ ಅಕ್ಕಿ ಮೂಟೆಗಳು ಸುಟ್ಟು ಕರಕಲಾಗಿದ್ದು, ಸುಟ್ಟ ಮೂಟೆಗಳಿಂದ ರಾಶಿಗಟ್ಟಲೆ ಅಕ್ಕಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ.








