
ಚೆಟ್ಟಳ್ಳಿ ಫೆ.27 NEWS DESK : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ವೀರಾಂಜನೇಯ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಚೆಟ್ಟಳ್ಳಿಯಲ್ಲಿ 5ನೇ ವರ್ಷದ ಮಹಾ ಶಿವರಾತ್ರಿ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಸಂಜೆ ಈರಳೆ ವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ಹಾಗೂ ಸಂಘದ ಮುಖ್ಯ ಕಛೇರಿಯ ಮುಂದಿರುವ ಪಶುಪತಿನಾಥನಿಗೆ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಪುತ್ತರಿರ ಕರುಣ್ ಕಾಳಯ್ಯ ಆರತಿ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶ್ರೀ ವಿನಾಯಕ, ಶ್ರೀ ಕಾವೇರಿಮಾತೆ, ಶ್ರೀ ಕೃಷ್ಣ, ಗೋಮಾತೆ, ಶ್ರೀ ಆಂಜನೇಯ ಮತ್ತು ಶ್ರೀ ಮಹಾವಿಷ್ಣು ಮೂರ್ತಿಗಳಿಗೆ ಅರ್ಚಕರಾದ ಯೋಗೆಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಭಕ್ತಾಧಿಗಳಿಗೆ
ಪ್ರಸಾದ ವಿತರಿಸಲಾಯಿತು. ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಕಳೆದ 5 ವರ್ಷಗಳಿಂದ ಚೆಟ್ಟಳ್ಳಿಯಲ್ಲಿ ಶಿವರಾತ್ರಿ ಅಚರಣೆಯನ್ನು ಮಾಡಲಾಗುತಿದ್ದು ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿಕೊಂಡರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಅಣತೆ ಬೆಳಗಿದರು. ರಾತ್ರಿ ಪಂಜ ಶ್ರೀ ಶಾರದಾಂಭ ಯಕ್ಷಗಾನ ಅಧ್ಯಯನ ಕೇಂದ್ರದವರಿಂದ ಸಂಗೀತ-ನೃತ್ಯ, ಶ್ರೀ ದೇವಿ ಮಹಾತ್ಮ ಯಕ್ಷಗಾನ ಬಯಲಾಟ ನಡೆದು ನೆರೆದಿದ್ದವರಿಗೆ ಅನ್ನಸಂರ್ಪಣೆ ನಡೆಯಿತು.









