
ಮಡಿಕೇರಿ ಫೆ.27 NEWS DESK : ಪ್ರತಿಷ್ಠಿತ ಸಿಐಐ – ಎಫ್‍ಪಿಒ ಎಕ್ಸಲೆನ್ಸಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನ ಪ್ರಮುಖರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ನಲ್ಲಿ ನಡೆದ ಮಹಾಶಿವರಾತ್ರಿ ಆಚರಣೆ ಸಂದರ್ಭ ಇಶಾ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈಶಾ ಫೌಂಡೇಶನ್ ನ 25 ಎಫ್‍ಪಿಒಗಳಲ್ಲಿ ಒಂದಾದ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಖರೀದಿ ಮತ್ತು ಮಾರಾಟ ವ್ಯವಹಾರದಲ್ಲಿ ರೂ.10 ಕೋಟಿಗೂ ಮೀರಿ ವ್ಯವಹಾರ ನಡೆಸಿದ ಯಶಸ್ವೀ ಸಂಸ್ಥೆ ಎಂಬ ಸಾಧನೆಗಾಗಿ 2023-24 ನೇ ಸಾಲಿನ ಸಿಐಐ – ಎಫ್‍ಪಿಒ ಎಕ್ಸಲೆನ್ಸಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಮಸ್ತ ರೈತರ ಪರವಾಗಿ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ನಿರ್ದೇಶಕರುಗಳಾದ ಕೇಟೋಳಿರ ರತ್ನ ಚರ್ಮಣ ಹಾಗೂ ಕೋಡಿರ ಪ್ರಸನ್ನ ಅವರುಗಳನ್ನು ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಸನ್ಮಾನಿಸಿದರು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸನ್ಮಾನ ಸ್ವೀಕರಿಸುವ ಸಂದರ್ಭ ಗೃಹ ಸಚಿವ ಅಮಿತ್ ಶಾ, ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಮುರುಗನ್ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಕೊಡಗಿನ ರೈತರಿಗೆ ಸಿಕ್ಕ ಗೌರವ :: ಇಶಾ ಫೌಂಡೇಶನ್ ನಿಂದ ದೊರೆತ್ತಿರುವ ಸನ್ಮಾನ ಕೊಡಗಿನ ಸಮಸ್ತ ರೈತ ಬಂಧುಗಳಿಗೆ ಸಮರ್ಪಣೆಯಾದ ಗೌರವವಾಗಿದೆ. ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಯಶಸ್ವೀ ಸಂಸ್ಥೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಇದಕ್ಕೆ ಜಿಲ್ಲೆಯ ಸರ್ವ ಬೆಳೆಗಾರರ ಹಾಗೂ ಸಹಕಾರಿಗಳ ಸಹಕಾರವೇ ಕಾರಣವಾಗಿದೆ. ಇಶಾ ಫೌಂಡೇಶನ್ ನಮ್ಮೊಂದಿಗೆ ಕೈ ಜೋಡಿಸಿರುವುದು ಹೆಮ್ಮೆ ಎನಿಸಿದೆ, ಇನ್ನು ಮುಂದೆಯೂ ಈ ಪೊನ್ನಾಡ್ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದು ಸನ್ಮಾನ ಸ್ಕೀಕರಿಸಿದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದರು.










