
ಕುಶಾಲನಗರ NEWS DESK ಫೆ.27 : ಕೊಡಗು ವಿವಿ ರದ್ದುಗೊಳಿಸಿ ಮಂಗಳೂರು ವಿವಿಗೆ ವಿಲೀನಗೊಳಿಸುವ ಸರ್ಕಾರದ ಚಿಂತನೆಯನ್ನು ವಿರೋಧಿಸಿ (28) ಅಳುವಾರ ವಿಶ್ವವಿದ್ಯಾಲಯದಿಂದ ಕುಶಾಲನಗರಕ್ಕೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಎರಡು ದಶಕಗಳ ಅವಧಿಯಿಂದ ಕೊಡಗು ಜಿಲ್ಲೆಗೆ ಪ್ರತ್ಯೇಕ ವಿವಿ ಬಗ್ಗೆ ಕಾಳಜಿ ವಹಿಸಿ ತಮ್ಮ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಶಂಕು ಸ್ಥಾಪನೆ ಮಾಡುವುದರೊಂದಿಗೆ ಸ್ಥಾಪನೆಗೊಂಡ ವಿಶ್ವವಿದ್ಯಾಲಯವನ್ನು ನಂತರ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಇದೀಗ ಕೊಡಗು ವಿವಿ ರದ್ದುಗೊಳಿಸಿ ಮಂಗಳೂರು ವಿವಿಗೆ ವಿಲೀನಗೊಳಿಸುವ ಚಿಂತನೆ ನಡೆಸಿರುವುದು ಖಂಡನೀಯ. ಕೊಡಗು ಜಿಲ್ಲೆಯ ತಳಸ್ತರದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನಾನುಕೂಲವಾಗಲಿದೆ. ತಕ್ಷಣ ಸರ್ಕಾರದ ಚಿಂತನೆಯನ್ನು ಹಿಂಪಡೆಯಬೇಕು. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಹೋರಾಟಗಳು ನಡೆಯುತ್ತಿವೆ. ಈ ಸಂಬಂಧ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಜಾಥಾ ಕಾರ್ಯಕ್ರಮಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ. ಹಲವು ಸಂಘಟನೆಗಳು ಈ ಜಾಥಾದಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು. ತಾವು ಈಗಾಗಲೇ ಈ ಬಗ್ಗೆ ಸರ್ಕಾರದ ಗಮನ ಸೆಳೆದಿರುವುದಾಗಿ ತಿಳಿಸಿದ ಅಪ್ಪಚ್ಚು ರಂಜನ್ ಒಂದು ವೇಳೆ ಕೊಡಗು ವಿವಿ ರದ್ದುಗೊಳಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷರಾದ ಗೌತಮ್ ಮಾತನಾಡಿ ಬೆಳಗ್ಗೆ ಅಳುವಾರ ವಿವಿಯಿಂದ 9:30ಕ್ಕೆ ಆರಂಭವಾಗಲಿರುವ ಜಾಥಾ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಚೇರಿ ತನಕ ಸಾಗಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಅಜಿತ್ ಕುಮಾರ್, ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ ಎಂ ಚರಣ್ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಕೆ ಟಿ ಮತ್ತು ವೈಶಾಖ್ ಇದ್ದರು.








