
ಮಡಿಕೇರಿ ಫೆ.28 NEWS DESK : ತಮ್ಮ ಗ್ರಾಮಕ್ಕೆ ಹೆದ್ದಾರಿಯಿಂದ ರಸ್ತೆ ಸಂಪರ್ಕ ಹೊಂದಲು ಹತ್ತಾರು ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನುಗಳನ್ನು ನೀಡಲು ಮುಂದಾಗಿದ್ದು, ರೈತರ ನಡೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮಕ್ಕೆ ಮಡಿಕೇರಿ-ಭಾಗಮಂಡಲ ರಸ್ತೆಯ ಅಪ್ಪಂಗಳದಿಂದ ಎರಡು ಕಿ.ಮೀ ನಷ್ಟು ದೂರದ ಕಾಲು ದಾರಿಯಿದೆ. ಆದರೆ ವಾಹನದ ಮೂಲಕ ಗ್ರಾಮ ತಲುಪಬೇಕು ಅಂದರೆ ತಾಳತ್ ಮನೆ, ಮೇಕೇರಿ, ಬಿಳಿಗೇರಿ ಗ್ರಾಮದ ಮೂಲಕ ಸುಮಾರು 10 ಕಿ.ಮೀ ದೂರ ಕ್ರಮಿಸಬೇಕು. ಹಾಗಾಗಿ ಗ್ರಾಮಸ್ಥರು ವಾಹನದಲ್ಲಿ ತ್ರಾಸದಾಯಕ ಒಡಾಟವನ್ನು ಮಾಡುತ್ತಿದ್ದರು. 2003 ರಲ್ಲಿ ಒಮ್ಮೆ ಎರಡು ಕಿ.ಮೀ ಕಾಲುದಾರಿಯನ್ನು ವಾಹನ ಸಂಚಾರದ ರಸ್ತೆಯಾಗಿ ಮಾರ್ಪಾಡು ಮಾಡಲು ಸಭೆ ನಡೆಸಿದ್ದರು. ಆದರೆ ರೈತರು ಜಮೀನು ಕಳೆದುಕೊಳ್ಳಲು ಒಪ್ಪದೇ ಇರುವುದರಿಂದ ಯೋಜನೆ ಕಾರ್ಯಗತವಾಗಿರಲಿಲ್ಲ. ಈಗ ಆ ಹಾದಿಯಲ್ಲಿರುವ ಸುಮಾರು ಹದಿನಾರು ರೈತರು ಗ್ರಾಮದ ಜನತೆಯ ಒಳಿತಿನ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಜಮೀನನ್ನು ರಸ್ತೆಗೆ ಬಿಟ್ಟುಕೊಡಲು ಒಪ್ಪಿದ ಹಿನ್ನಲೆಯಲ್ಲಿ ಸುಮಾರು 2.2 ಕಿ.ಮೀ ನಷ್ಟು 14 ಅಡಿ ರಸ್ತೆಯ ನಕಾಶೆಯನ್ನು ಸ್ಥಳ ದಾನಿ ರೈತರ ಒಪ್ಪಿಗೆಯೊಂದಿಗೆ ಸಿದ್ದಪಡಿಸಿ ಇಂದು ಸ್ಥಳೀಯ ಮುಖಂಡರಾದ ತೆನ್ನಿರ ಮೈನಾ ಸಹಕಾರದೊಂದಿಗೆ ಶಾಸಕರಾದ ಎ.ಎಸ್.ಪೊನ್ನಣ್ಣ ನವರಿಗೆ ವಿವರಗಳೊಂದಿಗೆ ವಿವರಣೆ ನೀಡಿದರು. ತಮ್ಮ ಜಮೀನನ್ನು ಗ್ರಾಮದ ಜನರ ಒಳಿತಿಗಾಗಿ ಸ್ವಯಂ ಪ್ರೇರಿತವಾಗಿ ರೈತರು ಬಿಟ್ಟುಕೊಡುತ್ತಿರುವ ಪ್ರಕರಣವನ್ನು ತಮ್ಮ ಸರ್ವೀಸ್ ನಲ್ಲಿ ಪ್ರಥಮ ಬಾರಿಗೆ ಕಾಣುತ್ತಿದ್ದೇನೆ ಎಂದು ಹರ್ಷ ವ್ಯಕ್ತ ಪಡಿಸಿದ ಎ.ಎಸ್.ಪೊನ್ನಣ್ಣ ಇಂತಹ ಔದಾರ್ಯ ಪ್ರತಿಯೊಂದು ಗ್ರಾಮದ ಜನತೆಯಲ್ಲಿ ಇರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿ ರಸ್ತೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಗ್ರಾಮಸ್ಥರಾದ ಪೂಜಾರಿರ ಹರ್ಷ, ಮುಂಜಾಂದಿರ ಸದಾ ಸುಬ್ಬಯ್ಯ,
ಗೋವಿಂದಮ್ಮನ ರಾಮಯ್ಯ (ಮಾಮ), ತಳೂರು ಕೇಶವ ಸೇರಿದಂತೆ ಇತರರು ಹಾಜರಿದ್ದರು.









