
ಮಡಿಕೇರಿ ಫೆ.28 NEWS DESK : ದೈವ ಆರಾಧನೆಯನ್ನು ಶಾಲೆಗಳ ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿ ಸುತ್ತೋಲೆ ಹೊರಡಿಸಿರುವ ಸರಕಾರದ ಕ್ರಮವನ್ನು ವಿರೋಧಿಸಿ ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಸಂಘದ ಪ್ರಮುಖರು, ದೈವ ಆರಾಧಕರು ಹಾಗೂ ದೈವ ನರ್ತಕರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ ಮಾತನಾಡಿ, ಮನೋರಂಜನೆಯ ಕಲೆಯ ಸಾಲಿಗೆ ದೈವ ಆರಾಧನೆಯನ್ನು ಸೇರಿಸುವ ಕ್ರಮ ಸರಿಯಲ್ಲವೆಂದರು. ದೈವ ಆರಾಧನೆಯು ಕರಾವಳಿ ಸೇರಿದಂತೆ ಕೊಡಗು ಜಿಲ್ಲೆಯಲ್ಲು ಬಹುಮುಖ್ಯ ನಂಬಿಕೆ ಮತ್ತು ಆರಾಧನೆ ಪದ್ದತಿಯಾಗಿದ್ದು, ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಈಗಿನ ಸರ್ಕಾರ ದೈವ ಆರಾಧನೆಯನ್ನು ಶಾಲೆಗಳ ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿರುವುದು ದೈವಾರಾಧನೆ ಮಾಡುವ ಕ್ಷೇತ್ರದ ಜನರಿಗೆ ನೋವುಂಟಾಗಿದೆ. ದೈವ ನರ್ತನ ಸೇವೆ ಮಾಡುವ ಕೆಲವೇ ಸೀಮಿತ ವರ್ಗದ ಸಮುದಾಯಕ್ಕೆ ಇದು ಅವಮಾನ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೈವ ಆರಾಧನೆ ವೇದಿಕೆ ಮೇಲೆ ಪ್ರದರ್ಶನ ಮಾಡುವ ಮನೋರಂಜನೆಗೆ ಬಳಸುವ ಜಾನಪದ ಕಲೆಯಲ್ಲ. ಸರ್ಕಾರ ನಾಡಿನ ವಿಭಿನ್ನ ಕಲೆ ಸಂಸ್ಕೃತಿಯನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಭರದಲ್ಲಿ ದೈವ ಆರಾಧನೆ (ಭೂತಾರಾಧನೆ)ಯನ್ನು ರಂಗೋತ್ಸವದ ಕಾರ್ಯಕ್ರಮದಲ್ಲಿ ಬಳಸುವಂತೆ ಸುತ್ತೋಲೆ ನೀಡಿರುವುದು ಧಾರ್ಮಿಕ ನಂಬಿಕೆಯ ಮೇಲೆ ಸವಾರಿ ಮಾಡಿದಂತಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ದೈವರಾಧನೆಯನ್ನು ರಂಗೋತ್ಸವದಿಂದ ಕೈ ಬಿಡುವಂತೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಬೇಕು. ಇಲ್ಲದಿದ್ದಲ್ಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪಿ.ಎಂ.ರವಿ ಎಚ್ಚರಿಕೆ ನೀಡಿದರು. ಸಂಘದ ಅಧ್ಯಕ್ಷ ಸದಾಶಿವ ರೈ, ಸಂಘಟನಾ ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ರಾಜೇಶ್ ಪೂಜಾರಿ, ಖಜಾಂಜಿ ಜನಾರ್ಧನ ಪೂಜಾರಿ, ಸಂಘದ ಸಲಹೆಗಾರ ಕೆ.ಕೆ.ದೇವಪ್ಪ, ಸುಳ್ಯದ ದೈವ ನರ್ತಕ ಜಯರಾಮ್, ಸುಬ್ರಹ್ಮಣ್ಯದ ದೈವ ನರ್ತಕ ಧರ್ಮ, ಸಂಘದ ಸದಸ್ಯರುಗಳಾದ ಪವನ್ ಮೊಗೇರ, ದಿನೇಶ್, ಅಣ್ಣು ಪೂಜಾರಿ, ಜನಾರ್ದನ, ರಾಮಕೃಷ್ಣ, ಸುರೇಶ್ ಕುಲಾಲ್, ಹರೀಶ್ ಜಿ.ಆಚಾರ್ಯ, ಮಂಜುನಾಥ್ ಸೇರಿದಂತೆ ಹಲವು ದೈವ ಆರಾಧಕರ ಸಂಘದ ಪದಾಧಿಕಾರಿಗಳು, ಕೊಡಗು, ಸುಳ್ಯ ಮತ್ತು ಸುಬ್ರಮಣ್ಯ ಭಾಗದ ದೈವ ನರ್ತಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.









