
ಮಡಿಕೇರಿ ಮಾ.1 NEWS DESK : ದೇವಸ್ತೂರಿನಲ್ಲಿ ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಬೆನ್ನಲ್ಲೇ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಸ್ವತಃ ತಾವೇ ಎಕ್ಸರೇ ಪರಿಶೀಲಿಸಿ ಸೂಕ್ತ ಚಿಕಿತ್ಸೆಗೆ ಸಹಕರಿಸಿದರು ಮಡಿಕೇರಿಯಿಂದ ದೇವಸ್ತೂರು ಕಾಲೂರು ಗ್ರಾಮಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಆಯ ತಪ್ಪಿಬಿದ್ದ ಪರಿಣಾಮ ಶಾಲ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಭಿವೃದ್ಧಿ ಕಾರ್ಯದ ಪ್ರಗತಿ ಪರಿಶೀಲನೆಯಲ್ಲಿದ್ದ ಡಾ.ಮಂತರ್ ಗೌಡ ಕಾರ್ಯಕ್ರಮ ಮೊಟುಕುಗೊಳಿಸಿ ಆಸ್ಪತ್ರೆಗೆ ಭೇಟಿ ನೀಡಿದರು. ತಾವೇ ಗಾಯಾಳುಗಳ ಎಕ್ಸರೇ ಪರಿಶೀಲಿಸಿ ಚಿಕಿತ್ಸೆಗೆ ಸೂಚನೆ ನೀಡುವ ಮೂಲಕ ಗಾಯಗೊಂಡವರ ಯೋಗ ಕ್ಷೇಮ ವಿಚಾರಿಸಿ ತಮ್ಮ ವೃತ್ತಿ ಪರ ಕರ್ತವ್ಯವನ್ನು ಪಾಲಿಸಿದ್ದಾರೆ. ಬಸ್ ಅತೀ ವೇಗದಲ್ಲಿ ಚಲಿಸಿದ ಕಾರಣ ಅಪಘಾತವಾಗಿದೆ ಎಂದು ಗಾಯಾಳುಗಳು ಶಾಸಕರೊಂದಿಗೆ ವಿವರಣೆ ನೀಡಿದ ಹಿನ್ನಲೆಯಲ್ಲಿ ಬಸ್ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಸೂಚಿಸಿದರು. ಎಲ್ಲಾ ಗಾಯಾಳುಗಳಿಗೆ ಯಾವುದೇ ರೀತಿಯ ಬಿಲ್ ಪಡೆಯದೇ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಮುಖ್ಯ ವೈದ್ಯರಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ಕೊಡಗು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಖ್ಯಸ್ಥ ಡಾ.ನಂಜುಡ ಸ್ವಾಮಿ, ಹಂಸ, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಪ್ರಮುಖರಾದ ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ವಿ.ಜಿ.ಮೋಹನ್, ಜಿ.ಸಿ.ಜಗದೀಶ್, ಚಂದ್ರ ಶೇಖರ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.









