
ನಾಪೋಕ್ಲು ಮಾ.3 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ನವಜೀವನ ಸಮಿತಿಗಳ ಸಹಯೋಗದಲ್ಲಿ 1855ನೇ ಮದ್ಯವರ್ಜನ ಶಿಬಿರದ ನವಜೀವನ ಸಮಿತಿ ಸದಸ್ಯರುಗಳ ವಿಶೇಷ ಸಭೆಯು ಮಡಿಕೇರಿಯಲ್ಲಿ ನಡೆಯಿತು. ನಗರದ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಟಿ.ಎಂ.ಅಯ್ಯಪ್ಪ ಉದ್ಘಾಟಿಸಿ ಮಾತನಾಡಿ, ಬೆಟ್ಟಗೇರಿ ವಲಯದ ಕಾರುಗುಂದ ಗೌಡ ಸಮಾಜದಲ್ಲಿ ಮದ್ಯವರ್ಜನ ಶಿಬಿರವು ಬಹಳ ಯಶಸ್ವಿಯಾಗಿ ನಡೆಯಿತು. ಈ ಶಿಬಿರದಿಂದ ಪಾನಮುಕ್ತರಾದ ತಾವುಗಳೆಲ್ಲರು ಧನ್ಯರು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ ಯೋಜನಾಧಿಕಾರಿ ಪುರುಷೋತ್ತಮ ಮಾತನಾಡಿ, ನವಜೀವನ ಸಮಿತಿಗಳನ್ನು ಅನುಪಾಲನೆ ಮಾಡುವಲ್ಲಿ ನವಜೀವನ ಪೋಷಕರು ಪ್ರಮುಖ ಪಾತ್ರ ವಹಿಸಬೇಕು ಎಂದರು. ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್ ನವಜೀವನ ಸಮಿತಿ ಸದಸ್ಯರುಗಳ ಯೋಗಕ್ಷೇಮ ವಿಚಾರಿಸಿ ವಾರಕ್ಕೊಮ್ಮೆ ನಡೆಯುತ್ತಿರುವ ಸಮಿತಿಯ ವಾರದ ಸಭೆಗಳ ಕುರಿತು ಮಾಹಿತಿ ಪಡೆದುಕೊಂಡರು. ಪರಿಣಾಮಕಾರಿ ವಾರದ ಸಭೆಗಳ ಉದ್ದೇಶ ಮಹತ್ವ ಪ್ರಯೋಜನಗಳು ಮತ್ತು ಶತದಿನೋತ್ಸವ ಕಾರ್ಯಕ್ರಮ ಬಗ್ಗೆ ವಿವರಿಸಿದರು. ಇದೇ ಸಂದರ್ಭ ಪಾನಮುಕ್ತ ಸದಸ್ಯರು ಮತ್ತು ಮನೆಯ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೇಲ್ವಿಚಾರಕರು, ಬೆಟ್ಟಗೇರಿ ವಲಯ ಹಾಗೂ ಪಾರ್ವತಿ ಒಕ್ಕೂಟದ ಅಧ್ಯಕ್ಷರಾದ ಬಿ.ಹೆಚ್.ವಿದ್ಯಾ, ಸೇವಾಪ್ರತಿನಿಧಿಗಳಾದ ಗೌರಮ್ಮ, ವಿಜಯಲಕ್ಷ್ಮಿ, ಭಾನುಮತಿ, ಪ್ರೇಮ, ಉಮಾಲಕ್ಷ್ಮಿ ಹಾಗೂ ನವಜೀವನ ಸಮಿತಿ ಸದಸ್ಯರುಗಳ ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಮಾಲಕ್ಷ್ಮಿ ಸ್ವಾಗತಿಸಿದರು, ವಿದ್ಯಾ ಬಿ.ಹೆಚ್ ನಿರೂಪಿಸಿದರು, ವಂದಿಸಿದರು.
ವರದಿ : ದುಗ್ಗಳ ಸದಾನಂದ.









