
ವಿರಾಜಪೇಟೆ ಮಾ.7 NEWS DESK : ಸಮುದಾಯಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಅಂತರ್ ರಾಷ್ಟ್ರೀಯ ರಗ್ಬಿ ಪಟು ಮತ್ತು ಪ್ರಗತಿ ಆಂಗ್ಲ ಮಾದ್ಯಮ ಶಾಲೆಯ ಆಡಳಿತಾಧಿಕಾರಿ ಮಾದಂಡ ತಿಮ್ಮಯ್ಯ ಹೇಳಿದರು. ವಿರಾಜಪೇಟೆಯ ಹಿಂದೂ ಮಲಯಾಳಿ ಅಸೋಶಿಯೇಷನ್ ವತಿಯಿಂದ ನಗರದ ಎಫ್.ಎಂ.ಸಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಎರಡನೆ ವರ್ಷದ ಮುಕ್ತ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿಯ ಪೊಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಸಮುದಾಯದ ಏಳಿಗೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಮಾಜಕ್ಕೆ ಪೂಕರವಾಗಿರುವ ವಿಷಯವಾಗಿದೆ. ವಿಶು ಹಬ್ಬದ ಪ್ರಯುಕ್ತ ಎಲ್ಲಾ ಸಮುದಾಯ ಬಾಂಧವರಿಗಾಗಿ ಕಾಲ್ಚೆಂಡು ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಹಿಂದೂ ಮಲಯಾಳಿ ಅಸೋಶಿಯೇಷನ್ ನ ಅಧ್ಯಕ್ಷ ಎ.ವಿನೂಪ್ ಕುಮಾರ್ ಮಾತನಾಡಿ, ವಿಶು ಹಬ್ಬವು ಮಲಯಾಳಂ ಭಾಷಿಕರ ಸಮೂದಾಯದ ಹಬ್ಬವಾಗಿದೆ. ಜನಾಂಗ ಬಾಂಧವರ ನಡುವಿನ ಬಾಂಧವ್ಯ ಬಲಪಡಿಸಲು ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಹಬ್ಬದ ಪ್ರಯುಕ್ತ ಹೊನಲು ಬೆಳಕಿನ 5+2 ಪುರುಷರ ಮುಕ್ತ ಕಾಲ್ಚೆಂಡು ಪಂದ್ಯಾವಳಿಯನ್ನು ಏ.18, 19 ಮತ್ತು 20 ರಂದು ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದೆ. ಕೊನೆಯ ದಿನ ಸಮುದಾಯದ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಹಿಂದೂ ಮಲಯಾಳಿ ಅಸೋಶಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಸಾಜು ಮಾತನಾಡಿ ವಿಶು ಕಪ್ ಪಂದ್ಯಾವಳಿ ಸಂಸ್ಥೆ ಆಯೋಜಿಸುವ ಎರಡನೇ ಕ್ರೀಡಾ ಹಬ್ಬವಾಗಿದೆ. ಮೊದಲ 32 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಾಲ್ಚೆಂಡು ಪಂದ್ಯಾವಳಿಯ ಪ್ರಥಮ ವಿಜೇತ ತಂಡ 1 ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ 75 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ತಂಡಗಳು ನೋಂದಾಣಿಗಾಗಿ ಏ.10 ಕೊನೆ ದಿನವಾಗಿದೆ. ತಂಡಗಳು ರೂ.5000 ರೂ ನೀಡಿ ತಂಡ ನೊಂದಾಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸದಸ್ಯರಾದ ಶಿನೋಜ್ -9483580664, ಸಾಜು-9901699062 ಉನ್ನಿ-8073594133 ಮತ್ತು ಸುನೀಲ್-9902318205 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಹಿಂದೂ ಮಲಯಾಳಿ ಅಸೋಶಿಯೇಷನ್ ಉಪಾಧ್ಯಕ್ಷ ದಿನೇಶ್ ನಂಬಿಯರ್, ಪ್ರಧಾನ ಕಾರ್ಯದರ್ಶಿ ಸಾಜು, ಕಾರ್ಯದರ್ಶಿ ಉನ್ನಿಕೃಷ್ಣನ್, ಕೋಶಾಧಿಕಾರಿ ಡಿ.ಕೆ.ಸುನಿಲ್ ಕುಮಾರ್, ಆಕ್ಸಫರ್ಡ ಪುಟ್ಬಾಲ್ ಕ್ಲಬ್ ನ ಅಧ್ಯಕ್ಷ ರೇನ್‍ಸನ್ ಚಾಕೋ, ಸದಸ್ಯರಾದ ಶಿನೋಜ್, ಸತೀಶ್, ಎನ್.ವಿ.ಸುನೀಲ್ ಮತ್ತು ಸುಮೇಶ್ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









