
ಮಡಿಕೇರಿ ಮಾ.7 NEWS DESK : ವಿನಾಕಾರಣ ಟೀಕೆಗೆ ಗುರಿಯಾಗುತ್ತಿರುವ ಖ್ಯಾತ ಚಲನಚಿತ್ರ ನಟಿ, ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರಿಗೆ ಸರ್ಕಾರ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಅನಾವರಣದ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅಪಾರ ಯಶಸ್ಸನ್ನು ಸಾಧಿಸಿದ್ದಾರೆ. ಇವರ ಜನಪ್ರಿಯತೆ ಹಾಗೂ ಕಲಾಪ್ರತಿಭೆಯನ್ನು ಅರಿಯದ ಶಾಸಕರು ವಿನಾಕಾರಣ ಟೀಕೆ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಿರುವುದು ಘೋರ ಸ್ವರೂಪ ಮತ್ತು ಬೆದರಿಕೆಗೆ ಸಮವಾಗಿದೆ ಎಂದು ಆರೋಪಿಸಿದ್ದಾರೆ. ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ರಂತಹ ಮೇರು ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಭಾರತೀಯ ಚಲನಚಿತ್ರ ರಂಗಕ್ಕೆ ದೊರೆತ ಅಪೂರ್ವ ಕೊಡುಗೆ ಹಾಗೂ ಶ್ರೇಷ್ಠ ನಟಿಯಾಗಿದ್ದಾರೆ. ಅವರ ಸ್ವಂತ ನಿರ್ಧಾರದ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವು ಗೌರವಿಸಬೇಕು. ಶಾಸಕರ ಸೂಚನೆಯಂತೆ ಅಥವಾ ನಿರೀಕ್ಷೆಯಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಬಾರದು. ಒಂದು ವೇಳೆ ಹೀಗೆ ಮಾಡಿದರೆ ಕೊಡವ ಫೋಬಿಯಾವನ್ನು ಪ್ರತಿಬಿಂಬಿಸುತ್ತದೆ, ಅಲ್ಲದೆ ಕೇವಲ ರಶ್ಮಿಕಾ ಅವರ ಸಮುದಾಯದ ಕಾರಣದಿಂದಾಗಿ ಗುರಿಪಡಿಸುತ್ತಿದ್ದಾರೆ ಎನ್ನುವ ಅರ್ಥ ಬರುತ್ತದೆ ಎಂದು ಟೀಕಿಸಿದ್ದಾರೆ. ಸರ್ಕಾರ ರಶ್ಮಿಕಾ ಮಂದಣ್ಣ ಅವರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು, ಆಕೆಗೆ ಅರ್ಹವಾದ ಗೌರವ ಲಭಿಸುವಂತೆ ನೋಡಿಕೊಳ್ಳಬೇಕು, ನಟಿಯ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಸ್ತ್ರೀಪರವಾದ ನ್ಯಾಯವನ್ನು ಎತ್ತಿಹಿಡಿಯಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಕಾವೇರಿ ನದಿಯನ್ನೇ ಬಹುವಾಗಿ ನೆಚ್ಚಿಕೊಂಡಿರುವ ಮಂಡ್ಯದ ಜನತೆಯನ್ನು ಪ್ರತಿನಿಧಿಸುವ ಶಾಸಕರು ಕಾವೇರಿ ಮಾತೆಯ ಪ್ರೀತಿಯ ಪುತ್ರಿ ಹಾಗೂ ಈ ಭಾಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅಗೌರವದಿಂದ ಕಂಡಿರುವುದು ನಿಜಕ್ಕೂ ವಿಪರ್ಯಾಸ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದಾಗಿ ಮತ್ತು ಜನರನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕರ ಅರ್ಥಹೀನ ಟೀಕಾ ಪ್ರಹಾರದ ಕಾರ್ಯವೈಖರಿ ಖಂಡನೀಯ. ರಶ್ಮಿಕಾ ಮಂದಣ್ಣ ಅವರ ವಿರುದ್ಧದ ಮಾನಸಿಕ ಕಿರುಕುಳದ ಟೀಕಾಪ್ರಹಾರ ಕೇವಲ ವೈಯುಕ್ತಿಕ ದಾಳಿಯಲ್ಲ, ಕೊಡವಲ್ಯಾಂಡ್ ಮತ್ತು ಕಾವೇರಿ ಭಾಗದ ಜನರ ಘನತೆಗೆ ಧಕ್ಕೆ ಉಂಟು ಮಾಡಿದ ದಾಳಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ನಡವಳಿಕೆಯ ವಿರುದ್ಧ ನಿಲ್ಲುವುದು ಮತ್ತು ಕಿರುಕುಳಕ್ಕೆ ಒಳಗಾದವರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ನಟಿ ರಶ್ಮಿಕಾ ಮಂದಣ್ಣ ಅವರನ್ನು ಬೆಂಬಲಿಸಿರುವ ಕ್ರಮ ಸ್ವಾಗತಾರ್ಹ ಮತ್ತು ಶ್ಲಾಘನೀಯವಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.









