
ಮಡಿಕೇರಿ ಮಾ.7 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ಕೊಡಗಿನ ಮಟ್ಟಿಗೆ ನಿರಾಶಾದಾಯಕವಾಗಿದೆ ಮತ್ತು ಅಲ್ಪಸಂಖ್ಯಾತರನ್ನು ಓಲೈಸಿ ಪರಿಶಿಷ್ಟರನ್ನು ಕಡೆಗಣಿಸಲಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಆರೋಪಿಸಿದ್ದಾರೆ. ಬಜೆಟ್ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅವರು ಕೆಲವು ಆಸ್ಪತ್ರೆಗಳು ಮತ್ತು ರಸ್ತೆಗಳ ಅಭಿವೃದ್ಧಿಯ ಕುರಿತು ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆಯೇ ಹೊರತು ಕೊಡಗು ಜಿಲ್ಲೆಗೆ ಬೇರೆ ಯಾವುದೇ ವಿಶೇಷ ಕೊಡುಗೆಯನ್ನು ನೀಡಿಲ್ಲ. ಕೊಡಗು ವಿಶ್ವ ವಿದ್ಯಾನಿಲಯವನ್ನು ಉಳಿಸುವ ಭರವಸೆ ನೀಡಿಲ್ಲ. ಮಿತಿ ಮೀರಿರುವ ವನ್ಯಜೀವಿಗಳ ದಾಳಿ ತಡೆಗೆ ಯಾವುದೇ ಯೋಜನೆಯನ್ನು ಘೋಷಿಸಿಲ್ಲ. ಕಾಫಿ ಬೆಳೆಗಾರರ ಹಾಗೂ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ರಾಜ್ಯಕ್ಕೆ ಕುಡಿಯುವ ನೀರನ್ನು ಒದಗಿಸುವ ಕಾವೇರಿ ನದಿಯ ಸ್ವಚ್ಛತೆಯನ್ನು ಕಾಪಾಡಲು ಅನುದಾನ ಮೀಸಲಿಟ್ಟಿಲ್ಲ. ಪ್ರವಾಸೋದ್ಯಮದ ಬೆಳವಣಿಗೆಗೆ ಅನುದಾನ ಘೋಷಣೆ ಮಾಡಿಲ್ಲ. ಜಿಲ್ಲೆಯಲ್ಲಿರುವ ಕಾಲೇಜುಗಳ ಅಭಿವೃದ್ಧಿಗೆ ಆಸಕ್ತಿ ತೋರಿಲ್ಲ ಎಂದು ಟೀಕಿಸಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಪರಿಶಿಷ್ಟರನ್ನು ಕಡೆಗಣಿಸಲಾಗಿದೆ, ಪರಿಶಿಷ್ಟರ ಶೈಕ್ಷಣಿಕ ಪ್ರಗತಿ ಮತ್ತು ಉದ್ಯೋಗದ ಖಾತ್ರಿಯನ್ನು ಸ್ಪಷ್ಟಪಡಿಸಿಲ್ಲ. ಎಲ್ಲಾ ಜಾತಿ ಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿದ್ದ ಕೊಡಗು ವಿವಿಯನ್ನು ಅನುದಾನದ ಕೊರತೆಯ ನೆಪವೊಡ್ಡಿ ರದ್ದುಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಮಹಿಳೆಯರಿಗಾಗಿ 16 ನೂತನ ಕಾಲೇಜುಗಳನ್ನು ಸ್ಥಾಪಿಸುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ಈ ನಾಡಿನ ಸಮಸ್ತ ವಿದ್ಯಾರ್ಥಿಗಳಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಮಿತಿಯನ್ನು 20 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವ ಸರ್ಕಾರ ಪರಿಶಿಷ್ಟ ವಿದ್ಯಾರ್ಥಿಗಳ ಶೈಕ್ಷಣಿಕೆ ಬೆಳವಣಿಗೆಗೆ ಏನನ್ನೂ ನೀಡಿಲ್ಲ. ಉರ್ದು ಶಾಲೆ, ಹಜ್ ಭವನ ಮತ್ತು ವಕ್ಫ್ ಖಬರಸ್ತಾನ್ ಗಳ ಅಭಿವೃದ್ಧಿ ಕುರಿತು ಬಜೆಟ್ ನಲ್ಲಿ ಕಾಳಜಿ ತೋರಿರುವ ಸರ್ಕಾರ ಹಿಂದೂಗಳ ದೇವಾಲಯ, ಗೋಶಾಲೆ, ಸ್ಮಶಾನ ಮತ್ತು ದೇವರಕಾಡುಗಳ ಅಭಿವೃದ್ಧಿಯ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ. ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ಎಂಬ ಅಹಿಂದ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಲ್ಪಸಂಖ್ಯಾತರಿಗೆ ಮಾತ್ರ ಬೆಣ್ಣೆ ನೀಡಿ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಕ್ಕೆ ಸುಣ್ಣ ನೀಡಿದೆ ಎಂದು ತೇಲಪಂಡ ಶಿವಕುಮಾರ್ ನಾಣಯ್ಯ ಆರೋಪಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಹಿಂದೂಗಳು ಮಾತ್ರವಲ್ಲ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟರು ಕೂಡ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.









