
ಮಡಿಕೇರಿ ಮಾ.7 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ 16ನೇ ಬಜೆಟ್, ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಯನ್ನು ಮತ್ತಷ್ಟು ಪುಷ್ಟೀಕರಿಸುವುದರೊಂದಿಗೆ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ, ರೈತ ಕೇಂದ್ರೀಕೃತ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ಮಾನವ-ಪ್ರಾಣಿ ಸಂಘರ್ಷ ನಿವಾರಣೆಗೆ ವಿಶೇಷ ಒತ್ತು ನೀಡಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್, ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆ, ಆರ್ಥಿಕ ಕ್ಷೇತ್ರದಲ್ಲಿನ ವಿಶೇಷ ಅನುಭವ ಹಾಗೂ ಆಡಳಿತದಲ್ಲಿನ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿರುವ ಅವರು, ರಾಜ್ಯದ ಕಟ್ಟ ಕಡೆಯ ಅಶಕ್ತ ಹಾಗೂ ಶೋಷಿತ ವ್ಯಕ್ತಿಯನ್ನು ಸಶಕ್ತಗೊಳಿಸುವ ದೂರದೃಷ್ಟಿ ಹೊಂದಿರುವ ಈ ಬಜೆಟ್, ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಅಭೂತಪೂರ್ವ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಕೊಡಗಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಗೆ ಅಧಿಕ ಅನುದಾನ ಒದಗಿಸುವುದರೊಂದಿಗೆ, ಕೊಡಗಿನ ಜಲ್ವಂತ ಸಮಸ್ಯೆಗಳಲ್ಲಿ ಒಂದಾಗಿರುವ ಮಾನವ-ಪ್ರಾಣಿ ಸಂಘರ್ಷದ ನಿವಾರಣೆಗೆ ಕೂಡಾ ವಿಶೇಷ ಗಮನಹರಿಸಲಾಗಿದೆ. ಕಾಡಾನೆಗಳ ಉಪಟಳದಿಂದ ಮುಕ್ತಿ ಹೊಂದಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಆನೆ ಕಂದಕ ಅಥವಾ ಸೋಲಾರ್ ತಂತಿ ಬೇಲಿ ನಿರ್ಮಾಣಕ್ಕೆ ಬಜೆಟ್’ನಲ್ಲಿ ವಿಶೇಷ ಅನುದಾನ ಒದಗಿಸಿರುವುದು ಮಾತ್ರವಲ್ಲದೆ, ಭದ್ರಾ ಅರಣ್ಯ ಭಾಗದಲ್ಲಿ ಆನೆಗಳ ಪುನರ್ವಸತಿ ಕೇಂದ್ರೀಕೃತ :ಸಾಫ್ಟ್ ರಿಲೀಸ್ ಏರಿಯಾ’ ಗೆ ಹಣ ಒದಗಿಸಲಾಗಿದೆ. ಆನೆ ತುಳಿತ ಅಥವಾ ಇತರ ಪ್ರಾಣಿ ದಾಳಿಗಳಿಂದ ಮೃತಪಟ್ಟವರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ₹ 15 ಲಕ್ಷದಿಂದ ₹ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಕೊಡಗು ಜಿಲ್ಲೆಗೆ ಈ ವಿಶೇಷ ಪ್ರಾತಿನಿಧ್ಯ ದೊರಕಲು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರ ವಿಶೇಷ ಪ್ರಯತ್ನ ಕಾರಣವಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.









