
ವಿರಾಜಪೇಟೆ ಮಾ.8 NEWS DESK : ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬೆಟೋಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಸಲಹೆ ನೀಡಿದರು. ಹೆಗ್ಗಳ ಸ.ಹಿ.ಪ್ರಾ ಶಾಲೆಯಲ್ಲಿ ನಡೆಯುತ್ತಿರುವ ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸ್ವಯಂ ಸೇವಾ ವಿದ್ಯಾರ್ಥಿಗಳ ಗ್ರಾಮ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಚ್ಛತೆ ಎಂಬುವುದು ತನ್ನೊಡನೆ ಆರಂಭವಾಗಬೇಕು. ಪರಿಸರ ಸ್ವಚ್ಛವಾಗಿಟ್ಟರೆ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಎಲ್ಲರೂ ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಸ್ವಚ್ಛತಾ ಜಾಗೃತಿಯಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಟೋಳಿ ಗ್ರಾ.ಪಂ ಅಧ್ಯಕ್ಷ ಅಚ್ಚಪಂಡ ಬೋಪಣ್ಣ, ಪಂಚಾಯತ್ ಸದಸ್ಯರುಗಳಾದ ಅಮ್ಮಣ ಕುಟ್ಟಂಡ ವಸಂತ, ಸುದೀಶ್, ರಜಾಕ್, ಲತಾ, ರಂಜಿತ್, ಎನ್.ಎಸ್.ಎಸ್ ಅಧಿಕಾರಿ ಶಾಂತಿಭೂಷಣ್, ಉಪನ್ಯಾಸಕಿ ವಿಲೀನ ಗೋನ್ಸಾಲ್ವೇಸ್, ಪಂಚಾಯತ್ ಸಿಬ್ಬಂದಿ ದಿನೇಶ್ ಸಾರ್ವಜನಿಕರು, ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹೆಗ್ಗಳ ಗ್ರಾಮದ ಸ.ಹಿ.ಪ್ರಾ ಶಾಲೆಯ ಮುಂಭಾಗದಿಂದ ಬೆಟೋಳಿ ಗ್ರಾಮ ಪಂಚಾಯತ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್, ಬಾಟಲಿಗಳನ್ನು ಹೆಕ್ಕುವುದರ ಮೂಲಕ ಸ್ವಚ್ಛತೆ ನಡೆಸಿದರು. ಮಾತ್ರವಲ್ಲದೆ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಿದರು.










